ವಿಜಯವಾಣಿ ಸುದ್ದಿಜಾಲ ಗದಗ
ಹಸ್ತಪ್ರತಿಗಳು ನಮ್ಮ ಪ್ರಾಚೀನರ ಪಠ್ಯವನ್ನು ದಾಖಲಿಸಿರುವ ನಿದಿಗಳಾಗಿವೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಡಾ.ಆರ್.ಸಿ.ಹಿರೇಮಠ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ನಿಂಗಣ್ಣ ಮುದೇನೂರು ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜೆ.ಟಿ.ಮಹಾವಿದ್ಯಾಲಯದ ಕನ್ನಡ, ಇಂಗ್ಲಿಷ ವಿಭಾಗ ಹಾಗೂ ಕಾಲೇಜು ಆಂತರಿಕ ಗುಣಮಟ್ಟ ಕೋಶದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥ ಸಂಪಾದನೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಕನ್ನಡ ಜ್ಞಾನ ಪರಂಪರೆ ಹಸ್ತಪ್ರತಿಗಳಲ್ಲಿ ದಾಖಲಾಗಿದೆ.ಮೂಲ ಹಸ್ತಪ್ರತಿಗಳನ್ನು ಆಧರಿಸಿ ಎಂ.ಎಂ.ಕಲ್ಬುರ್ಗಿಯವರು ವಚನ ಸಾಹಿತ್ಯದ ಸಂಪುಟಗಳನ್ನು ಸಂಪಾದಿಸಿದ್ದಾರೆ. ಕಲ್ಬುರ್ಗಿಯವರು, ಆರ್.ಸಿ.ಹಿರೇಮಠರು, ಬಿ.ಎಸ್.ಸಣ್ಣಯ್ಯನವರು ಚಿದಾನಂದ ಮೂರ್ತಿಯವರು ತಮ್ಮ ಜೀವನವನ್ನೆ ಗ್ರಂಥ ಸಂಪಾದನೆಗಾಗಿ ಮೀಸಲಿಟ್ಟಿದ್ದರು. ಜ್ಞಾನವನ್ನು ಸಂರಕ್ಷಿಸುವ ಕಾಳಜಿ ನಮ್ಮ ಪೂರ್ವಜರಲ್ಲಿತ್ತು. ಅವರು ಹಸ್ತಪ್ರತಿಗಳಲ್ಲಿ ಕಾವ್ಯಗಳು, ಪುರಾಣಗಳು, ವ್ಯಾಕರಣ ಶಾಸ್ತ್ರ ಕೃತಿಗಳನ್ನು ರಚನೆಮಾಡಿದ್ದಾರೆ. ಶಾಸನಗಳು, ವೀರಗಲ್ಲುಗಳು, ಹಸ್ತಪ್ರತಿಗಳು, ಕೈಫಿಯತ್ತುಗಳು ಪ್ರಾಚೀನ ಜನರ ಜೀವನದ ಹಾಗೂ ಸಾಂಸ್ಕೃತಿಕ ಜೀವನದ ವಿಚಾರಗಳನ್ನು ಒಳಗೊಂಡಿವೆ. ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ಜ್ಞಾನ ಪರಂಪರೆಯ ಆಕರಗಳು ಹಸ್ತಪ್ರತಿಗಳಾಗಿವೆ. ಇವುಗಳಲ್ಲಿ ರಾಜರ ಸಾಹಸಗಳನ್ನು, ದಿಗ್ವಿಜಯಗಳನ್ನು, ಧಾರ್ಮಿಕ ವಿಚಾರಗಳನ್ನು, ಶಾಸ್ತ್ರ ವಿಚಾರಗಳನ್ನು ಹಸ್ತಪ್ರತಿಗಳು ಒಳಗೊಂಡಿವೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯ ಇಂಗ್ಲಿಷ ವಿಭಾಗದ ಡಾ.ಫಕ್ಕೀರೇಶ ಹಳ್ಳಳ್ಳಿ ಮಾತನಾಡಿ ಸಾಹಿತ್ಯವು ಕಾಲ್ಪನಿಕ, ಆದರೆ ಮೂಢನಂಬಿಕೆಯಲ್ಲ. ಸಾಹಿತ್ಯವು ಕಾಲ್ಪನಿಕವಾದರೂ, ಅದು ಕೇವಲ ಮೂಢನಂಬಿಕೆಯಲ್ಲ. ಬದಲಾಗಿ ಸಮಾಜದಲ್ಲಿ ಒಂದು ಕಡೆ ಅಸ್ತಿತ್ವದಲ್ಲಿರುವ ನೈಜ ಘಟನೆಗಳ ಬೇರುಗಳನ್ನು ಹೊಂದಿರುತ್ತದೆ ಎಂದು ಹೇಳಿದರು.
ಸಾಮಾನ್ಯ ಮಾನವ ಭಾವನೆಗಳ ಚಿತ್ರಣ ಸಾಹಿತ್ಯದಲ್ಲಿ ಅಸೂಯೆ, ವ್ಯಾಮೋಹ ಅಥವಾ ಗೀಳು, ಮುಖಸ್ತುತಿ, ಮತ್ತು ಇತರರನ್ನು ಮೆಚ್ಚಿಸುವಂತಹ ಸಾಮಾನ್ಯ ಮಾನವ ಭಾವನೆಗಳನ್ನು ಅದ್ಭುತವಾಗಿ ಪ್ರತಿನಿಧಿಸಲಾಗುತ್ತದೆ ಎಂದರು.
ತೇಜಸ್ವಿನಿ ಮಾಗಡಿ, ಪ್ರೊ. ಗಿರಿಧರ್ ಕೆ ಆರ್, ಪ್ರೊ. ವಿಶ್ವನಾಥ ಜಿ., ಪ್ರೊ. ಬಿ. ಆರ್. ಚಿನಗುಂಡಿ, ಪ್ರೊ ಪಿ.ಜಿ ಪಾಟೀಲ್, ಡಾ. ರಮೇಶ ಜಿ.ಕೆ., ಕೋಟೆಮ್ಮ ರೆಡ್ಡಿ, ರಜನಿ ಕುರಿ ಇತರರು ಇದ್ದರು.