ತೋಂಟದಾರ್ಯ ಮಠದ ಮಹಾರಥೋತ್ಸವ

ತೋಂಟದಾರ್ಯ ಮಠದ ಜಾತ್ರಾಮಹೋತ್ಸವ ನಿಮಿತ್ಯ ಗುರುವಾರ ಮಠದ ಬೀದಿಯಲ್ಲಿ ಮಹಾರಥೋತ್ಸವ ಜರುಗಿತು.
ತೋಂಟದಾರ್ಯ ಮಠದ ಜಾತ್ರಾಮಹೋತ್ಸವ ನಿಮಿತ್ಯ ಗುರುವಾರ ಮಠದ ಬೀದಿಯಲ್ಲಿ ಮಹಾರಥೋತ್ಸವ ಜರುಗಿತು.
Published on
ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ತೋಂಟದಾರ್ಯ ಮಠದ ಮಹಾ ರಥೋತ್ಸವವು ಭಕ್ತ ಸಾಗರದ ಮಧ್ಯೆ ಗುರುವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು. ಮಠದ ಪ್ರಾಂಗಣದಿಂದ ಆರಂಭವಾದ ರಥೋತ್ಸವವು ತೇರಿನ ಬೀದಿಯಲ್ಲಿ ಭಕ್ತಸಾಗರದ ನಡುವೆ ಸಾಗಿತು.
ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು, ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಎಸೆದು ಭಕ್ತಿ ಸರ್ಮಪಿಸಿದರು. ರಥೋತ್ಸವ ಉದುದ್ದಕ್ಕೂ ಹರ...ಹರ...ಮಹಾದೇವ, ಗುರು ಬಸವಲಿಂಗಾಯ ನಮಃ, ಶ್ರೀಸಿದ್ಧಲಿಂಗಾಯ ನಮಃ ಜಯಘೋಷಗಳು ಮುಗಿಲು ಮುಟ್ಟಿದವು. ಇದಕ್ಕೂ ಮೊದಲು ಸಾವಿರಾರು ಭಕ್ತರು ಮಠದಲ್ಲಿ ಹಿರಿಯ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು.
ವಚನಕಟ್ಟು ಪಲ್ಲಕ್ಕಿ ಉತ್ಸವ:
ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳನ್ನು ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾವಿರಾರು ಭಕ್ತರೊಂದಿಗೆ ಎರಡು ಕಿಮಿ ಉದ್ದದ ಮೆರವಣಿಗೆಯೊಂದಿಗೆ ನಡೆದುಕೊಂಡು ಬಂದರು. ಮಹಾರಥೋತ್ಸವದಲ್ಲಿ 10ಕ್ಕೂ ಹೆಚ್ಚು ಸಾಂಸತಿಕ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡವು.
ಕಲಾ ತಂಡಗಳು ಮೆರುಗು:
ರಥೋತ್ಸವಕ್ಕೆ ಮುನ್ನ ಪರಂಪರೆಯಂತೆ ವೀರನಾರಾಯಣ ರಸ್ತೆಯಲ್ಲಿರುವ ಎಸ್​.ಎಸ್​.ಕಳಸಾಪೂರಶೆಟ್ರ ನಿವಾಸದಿಂದ ಅಲಂಕೃತ ತೆರೆದ ವಾಹನದಲ್ಲಿ ಡಾ.ತೋಂಟದ ಸಿದ್ಧರಾಮ ಶ್ರೀಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬಂದಿತು. ರಸ್ತೆಯುದ್ದಕ್ಕೂ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಮೆರವಣಿಗೆ ತಂಡಗಳಿಗೆ ವರ್ತಕರು ಕುಡಿಯಲು ತಂಪು ಪಾನಿಯಗಳನ್ನು ವಿತರಿಸಿದರು. ಭಜನಾ ಮಂಡಳಿ, ನಂದಿಕೋಲು, ಸಾಂಪ್ರದಾಯಿಕ ಉಡುಪಿನೊಂದಿಗೆ ಸಾಗಿದ ಛತ್ರಚಾಮರಗಳು ಭಕ್ತರ ಮನಸೂರೆಗೊಂಡವು. ತೆರೆದ ವಾಹನದಲ್ಲಿ ಆಗಮಿಸಿದ ಶ್ರೀಗಳಿಗೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸರ್ಮಪಿಸಿದರು. ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಬೃಹತ್​ ಮೆರವಣಿಗೆ:
ನಗರದ ಎಸ್​.ಎಸ್​.ಕಳಸಾಪೂರಶೆಟ್ರ ಮನೆಯಿಂದ ಆರಂಭವಾದ ಮೆರವಣಿಗೆ ಸರಾಫ್​ ಬಜಾರ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್​ ವೃತ್ತ, ಮಹೇಂದ್ರಕರ್​ ವೃತ್ತದ ಮೂಲಕ ಮಠಕ್ಕೆ ತಗಲುಪಿತು. ಜಾಂಜ್​ ಮೇಳ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯ ಮೇಳಗಳು, ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ಸುಮಾರು ಮೂರು ಗಂಟೆಗೂ ಅಧಿಕ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳ ಮೆರವಣಿಗೆಗೆಯೂ ನೋಡುಗರನ್ನು ಕಣ್ಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net