ಇಂಧನ ಪೂರೈಕೆಯಲ್ಲಾಗುವ ವ್ಯತ್ಯೆಯ ಸಮರ್ಪಕವಾಗಿ ನಿರ್ವಹಿಸಿ: ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ

ಗದಗ ಜಿಲ್ಲಾಡಳಿತ ಭವನದಲ್ಲಿ ಇಂಧನ ಕೊರತೆ ಕುರಿತು ಸಭೆ ಜರುಗಿತು. ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ, ಆಹಾರ ಇಲಾಖೆ ಉಪನಿರ್ದೇಶಕರು, ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು, ಬಂಕ್​ ಮಾಲೀಕರು ಸೇರಿದಂಯೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಇಂಧನ ಕೊರತೆ ಕುರಿತು ಸಭೆ ಜರುಗಿತು. ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ, ಆಹಾರ ಇಲಾಖೆ ಉಪನಿರ್ದೇಶಕರು, ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು, ಬಂಕ್​ ಮಾಲೀಕರು ಸೇರಿದಂಯೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಲ್ಲಿ ಪೆಟ್ರೋಲ ಹಾಗೂ ಡೀಸೆಲ್​ ಪೂರೈಕೆಯಲ್ಲಿ ಆಗುವ ವ್ಯತ್ಯೆಯವನ್ನು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕದಿಂದ ಇಂಧನ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ಇತ್ತೀಚೆಗೆ ಇಂಧನ ಕೊರತೆ ಕುರಿತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುವುದು ಹಾಗೂ ಕೆಲವು ಬಂಕ್​ಗಳಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜರುಗಿದ ಪೆಟ್ರೋಲ ಬಂಕ್​ ಮಾಲೀಕರು, ತೈಲ ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೈಲ ಕಂಪನಿಗಳು ಸಮಯಕ್ಕೆ ಸರಿಯಾಗಿ ಇಂಧನ ಪೂರೈಸುವಂತೆ ಕ್ರಮ ವಹಿಸಬೇಕು. ಪೆಟ್ರೋಲ ಬಂಕ್​ಗಳಲ್ಲಿ ಸಾಕಷ್ಟು ದಾಸ್ತಾನು ಇದ್ದರೂ ಸಾರ್ವಜನಿಕರಿಗೆ ಇಂಧನ ನೀಡದೆ ಬಂಕ್​ ಮುಚ್ಚುವುದು ಅಥವಾ ಇಂಧನ ಲಭ್ಯವಿಲ್ಲ ಎಂಬ ಫಲಕ ಹಾಕಿ ಕೃತಕ ಅಭಾವ ಸೃಷ್ಟಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇಲಾಖೆಯ ಆಟೋಮೇಷನ್​ ವ್ಯವಸ್ಥೆಯ ಮೂಲಕ ಬಂಕ್​ಗಳ ದಾಸ್ತಾನು ಸ್ಥಿತಿಯನ್ನು ಆನ್​ಲೈನ್​ನಲ್ಲೇ ಪರಿಶೀಲಿಸಲು ಅವಕಾಶವಿದ್ದು, ನಿಯಮ ಉಲ್ಲಂಘಿಸುವ ಡೀಲರ್​ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಡಳಿತ ಪೆಟ್ರೋಲ ಬಂಕ್​ಗಳಿಗೆ ಇಂಧನ ಸರಬರಾಜಿನಲ್ಲಿ ಅಗತ್ಯ ಸಹಕಾರ ನೀಡಲು ಸಿದ್ಧವಿದೆ. ಬಂಕ್​ ಮಾಲೀಕರು ಸಹ ಸರ್ಕಾರದೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಇಂಧನ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಂಧನ ಕೊರತೆಯಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದು ಎಲ್ಲರು ಜವಾಬ್ದಾರಿಯಾಗಿದ್ದು, ಇಂಡೆಂಟ್​ ಆಧಾರದ ಮೇಲೆ ಆದ್ಯತೆಯ ಕ್ರಮದಲ್ಲಿ ಇಂಧನ ಪೂರೈಕೆ ಆಗಬೇಕು. ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ವಿತರಣಾ ವ್ಯವಸ್ಥೆ ಇರಬೇಕು ಎಂದು ಹೇಳಿದರು.
ದೈನಂದಿನ ವಾಹನ ಸವಾರರಿಗೆ ಎಂದಿನಂತೆ ಯಾವುದೇ ಅಡೆತಡೆ ಇಲ್ಲದೇ ಇಂಧನ ಪೂರೈಸಬೇಕು. ಬಂಕ್​ಗಳಲ್ಲಿ ಜನಸಂದಣಿ ಹೆಚ್ಚಾದ ಸಂದರ್ಭದಲ್ಲೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಅವಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕ್ಯಾನ್​ ಹಾಗೂ ಬ್ಯಾರೆಲ್​ಗಳಲ್ಲಿ ಇಂಧನ ಮಾರಾಟ ಮಾಡುವುದನ್ನು ನಿರ್ಭಂಧಿಸಲಾಗಿದೆ. ಆಸ್ಪತ್ರೆಗಳು, ಎಟಿಎಂ ಕೇಂದ್ರಗಳು, ಮೊಬೈಲ್​ ಟವರ್​ಗಳು ಹಾಗೂ ಇತರೆ ಅಗತ್ಯ ಸೇವೆಗಳ ಜನರೇಟರ್​ಗಳಿಗೆ ಡೀಸೆಲ್​ ಅನಿವಾರ್ಯವಾಗಿದ್ದಲ್ಲಿ ಮಾತ್ರ ಸಂಬಂಧಪಟ್ಟವರು ಸ್ಥಳಿಯ ತಹಶೀಲ್ದಾರ್​ ಅಥವಾ ಜಿಲ್ಲಾಡಳಿತದಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ಆಹಾರ ಇಲಾಖೆ ಅಥವಾ ಕಂದಾಯ ಇಲಾಖೆಯ ಅನುಮೋದನೆ ಪಡೆದವರಿಗೆ ಮಾತ್ರ ಕ್ಯಾನ್​ ಅಥವಾ ಬ್ಯಾರೆಲ್​ ಮೂಲಕ ಇಂಧನ ವಿತರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಪೆಟ್ರೋಲ್​ ಬಂಕ್​ ಮಾಲೀಕರು ಮತ್ತು ಪ್ರತಿನಿಧಿಗಳು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ವಿಶೇಷವಾಗಿ ಹುಬ್ಬಳ್ಳಿಇಂದ ಇಂಧನ ಟ್ಯಾಂಕರ್​ಗಳು ಬರುವಾಗ ಸಂಚಾರ ದಟ್ಟಣಿಯಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರು, ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು, ಬಂಕ್​ ಮಾಲೀಕರು ಸೇರಿದಂಯೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net