ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್​ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಸಿಎಸ್​ಆರ್​ ಸಭೆ

ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್​ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಭವನದಲ್ಲಿ ಸಿಎಸ್​ಆರ್​ ಸಭೆ ಜರುಗಿತು. ಸಿ.ಎನ್​. ಶ್ರೀಧರ, ಆರ್​. ಎಸ್​. ಬುರಡಿ, ಸಿ.ಆರ್​. ಮುಂಡರಗಿ, ಡಾ. ಶರಣು ಗೊಗೇರಿ, ಎಲ್ಲಾ ಸಮುದಾಯ ಉದ್ಯಮಿಗಳು, ಕಾಪೋರೇಟ ಕಂಪನಿಯ ಅಧಿಕಾರಿಗಳು ಇದ್ದರು.
ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್​ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಭವನದಲ್ಲಿ ಸಿಎಸ್​ಆರ್​ ಸಭೆ ಜರುಗಿತು. ಸಿ.ಎನ್​. ಶ್ರೀಧರ, ಆರ್​. ಎಸ್​. ಬುರಡಿ, ಸಿ.ಆರ್​. ಮುಂಡರಗಿ, ಡಾ. ಶರಣು ಗೊಗೇರಿ, ಎಲ್ಲಾ ಸಮುದಾಯ ಉದ್ಯಮಿಗಳು, ಕಾಪೋರೇಟ ಕಂಪನಿಯ ಅಧಿಕಾರಿಗಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸಲು ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್​ ಶಾಲೆಗಳನ್ನಾಗಿ ಪರಿವತಿರ್ಸಲು ಕಾಪೋರ್ರೇಟ್​ ಸಾಮಾಜಿಕ ಹೊಣಿಗಾರಿಕೆ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ಪಬ್ಲಿಕ್​ ಶಾಲೆಗಳನ್ನಾಗಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮುದಾಯ ಉದ್ಯಮಿಗಳ ಮತ್ತು ಕಾಪೋರೇಟರ್​ ಸಾಮಾಜಿಕ ಹೊಣೆಗಾರಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಎಲ್​ಕೆಜಿಯಿಂದ 12ನೇ ತರಗತಿ ವರೆಗೆ ಒಂದೇ ಸೂರಿನಡಿ ಉಚಿತ ಇಂಗ್ಲಿಷ್​ ಮತ್ತು ಕನ್ನಡ ಮಾಧ್ಯಮ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಜಿಲ್ಲೆಯ ಕೆಪಿಎಸ್​ ಶಾಲೆಗಳಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 80 ರಿಂದ 90 ಕ್ಕೂ ಹೆಚ್ಚು ಉತ್ತಮ ಫಲಿತಾಂಶ ದಾಖಲಾಗುತ್ತಿದೆ ಎಂದರು.
ಕಾಪೋರೇಟ್​ ಸಂಸ್ಥೆಗಳು ತಮ್ಮ ಲಾಭಾಂಶದ ಶೇ. 2 ರಷ್ಟು ಸಿಎಸ್​ಆರ್​ ನಿಧಿಯನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುವುದು ಕಡ್ಡಾಯವಿದ್ದು, ಈ ನಿಧಿಯನ್ನು ಶಿಕ್ಷಣ ಇಲಾಖೆಯ ಸುಧಾರಣೆಗೆ ಬಳಸಿಕೊಳ್ಳಲು ಉದ್ಯಮಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 20 ಕೆಪಿಎಸ್​ ಶಾಲೆಗಳು ಕಾರ್ಯಾಚರಿಸುತ್ತಿವೆ. ಉಳಿದ ಸುಮಾರು 700 ಕ್ಕೂ ಹೆಚ್ಚು ಶಾಲೆಗಳನ್ನು ಸಂಯೋಜಿಸಿ, ಹೊಸದಾಗಿ 37 ಹೆಚ್ಚುವರಿ ಕೆಪಿಎಸ್​ ಶಾಲೆಗಳನ್ನು ಕ್ಲಸ್ಟರ್​ ಮಾದರಿಯಲ್ಲಿ ರೂಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕೆಪಿಎಸ್​ ಶಾಲೆಗಳನ್ನು ಆಯ್ಕೆ ಮಾಡುವುದರಿಂದ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶ, ದ್ವಿಬಾಷಾ ಮಾಧ್ಯಮದ ಸೌಲಭ್ಯ, ಹಣದ ಉಳಿತಾಯ, 14 ವರ್ಷಗಳ ನಿರಂತರ ಶಿಕ್ಷಣ, ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದರು.
ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣವೇ ನಾವು ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಉದ್ಯಮಿಗಳು ಹಾಗೂ ಕಾಪೋರೇಟ್​ ಸಂಸ್ಥೆಗಳು ಶಾಲಾ ಕಟ್ಟಡ, ಸ್ಮಾರ್ಟ ತರಗತಿ, ಕಂಪ್ಯೂಟರ್​ ಲ್ಯಾಬ್​, ಗ್ರಂಥಾಲಯ, ವಾಹನ ಸಾರಿಗೆ ವ್ಯವಸ್ಥೆ ಹಾಗೂ ಶಿಕ್ಷಕರ ನೇಮಕಕ್ಕೆ ಸಿಎಸ್​ಆರ್​ ಮೂಲಕ ನೇರವಾಗಿ ನೆರವು ನೀಡಬಹುದು. ಕಾಪೋರೇಟ್​ ಸಂಸ್ಥೆಗಳು ಕೇವಲ ಸಣ್ಣಪುಟ್ಟ ಕೆಲಸಗಳಿಗೆ ಅಥವಾ ತಾತ್ಕಾಲಿಕ ನೆರವಿಗೆ ಸೀಮಿತವಾಗದೆ, ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ದತ್ತು ಅಥವಾ ಸಮಗ್ರ ಅಭಿವೃದ್ಧಿಗೆ ಮುಂದೆ ಬರಬೇಕು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್​.ಎಸ್​. ಬುರಡಿ ಮಾತನಾಡಿ ಕೆಪಿಎಸ್​ ಶಾಲೆಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶವು ಸಾಮಾನ್ಯ ಸರ್ಕಾರಿ ಶಾಲೆಗಳಿಗಿಂತ ಗಣನೀಯವಾಗಿ ಉತ್ತಮವಾಗಿದೆ. ವಿದ್ಯಾಥಿರ್ಗಳ ಶೈಕ್ಷಣಿಕ ಸಾತತ್ಯತೆ ಕಾಯ್ದುಕೊಳ್ಳಲು ಸಹಾಯವಾಗಿದೆ ಎಂದರು.
ಆಸಕ್ತ ಸಂಸ್ಥೆಗಳು ಹಾಗೂ ಉದ್ಯಮಿಗಳು ನಮ್ಮ ಶಾಲೆ ನನ್ನ ಕೊಡುಗೆ ಆನ್​ಲೈನ್​ ವೆಬ್​ಸೈಟ್​ ಮೂಲಕ ಅಥವಾ ಜಿಲ್ಲಾ ಸಿಎಸ್​ಆರ್​ ಕೋಶದ ಮೂಲಕ ನೇರವಾಗಿ ಪ್ರಸ್ತಾಪಗಳನ್ನು ಸಲ್ಲಿಸಿ ಶಾಲೆಗಳ ದತ್ತು ಪಡೆಯಬಹುದು ಎಂದು ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್​ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಮೂಲಸೌಕರ್ಯ ಹಾಗೂ ಅಗತ್ಯತೆಗಳ ಮಾಹಿತಿಯನ್ನು ಸಿದ್ಧಪಡಿಸಲಾಗಿದೆ. ಸುಮಾರು 37 ಕರ್ನಾಟಕ ಪಬ್ಲಿಕ್​ ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಿದ್ದು, ಪ್ರತಿಯೊಂದು ಶಾಲೆಯ ವ್ಯಾಪ್ತಿ, ಅಗತ್ಯವಿರುವ ಕೊಠಡಿಗಳು, ಸ್ಮಾರ್ಟ ಕ್ಲಾಸ್​ರೂಂ ಹಾಗೂ ಇತರ ಸೌಲಭ್ಯಗಳ ನಿಖರ ಪಟ್ಟಿಯನ್ನು ತಯಾರಿಸಿ ಆಯಾ ಭಾಗದ ಕಂಪನಿಗಳಿಗೆ ಇಮೇಲ್​ ಮೂಲಕ ಕಳುಹಿಸಲಾಗುವುದು. ಪ್ರತಿಯೊಂದು ಶಾಲೆಯ ಅಗತ್ಯತೆಗೆ ತಕ್ಕಂತೆ ಸಿಎಸ್​ಆರ್​ ನೆರವು ಪಡೆಯಲು ಯೋಜನೆ ರೂಪಿಸಲಾಗಿದೆ ಉಪನಿರ್ದೇಶಕ ಆರ್​. ಎಸ್​. ಬುರಡಿ ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದಶಿರ್ ಸಿ.ಆರ್​. ಮುಂಡರಗಿ, ಡಾ. ಶರಣು ಗೊಗೇರಿ, ಎಲ್ಲಾ ಸಮುದಾಯ ಉದ್ಯಮಿಗಳು, ಕಾಪೋರೇಟ ಕಂಪನಿಯ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net