2022ರ ಸೆಪ್ಟೆಂಬರ್ನಲ್ಲಿ ಹಜರತ್ ಮೌಲ್ವಿ ಲಕ್ಕುಂಡಿಗೆ ಬಂದು ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಅವರ ಜಮೀನಿನಲ್ಲಿ ಕಪ್ಪು ಮೆಣಸು ಹಾಗೂ ಕೆಲವು ವಸ್ತುಗಳನ್ನು ಎಸೆದು ಇಲ್ಲೇ ನಿಧಿ ಇದೆ ಎಂದು ಜಾಗ ಗುರುತಿಸಿ, ಒಂದು ತಿಂಗಳ ನಂತರ ಬರುವುದಾಗಿ ಹೇಳಿ ಹೋಗಿದ್ದ. ಬಳಿಕ ವಂಚನೆಗೆ ಸಂಚು ರೂಪಿಸಲು ಸಿದ್ಧತೆ ಮಾಡಿಕೊಂಡಿದ್ದ. ಗದಗ ನಗರದ ಮಹೇಂದ್ರಕರ ಸರ್ಕಲ್ ಬಳಿ ಇರುವ ಸ್ಟೀಲ್ ಅಂಗಡಿಯಲ್ಲಿ 6,800 ಕೊಟ್ಟು ಹಳೆಯ ಹಂಡೆ ಖರೀದಿಸಿದ್ದ. ಅದಕ್ಕೆ ಬಟ್ಟೆ ಸುತ್ತಿ, ಪೂಜೆ ಸಾಮಾನು ಎಂದು ಹೇಳಿ ಜುಬೇರ್ ಮೂಲಕ ಲಕ್ಕುಂಡಿಗೆ ತೆಗೆದುಕೊಂಡು ಹೋಗಿದ್ದ. ಇದಕ್ಕಿಂತ ಕುತೂಹಲಕರವಾಗಿ, ಮಂಜುನಾಥ ರೆಸಿಡೆನ್ಸಿ ಸಮೀಪದ ಅಂಗಡಿಯಲ್ಲಿ 80 ರೂ. ನೀಡಿ 80 ಚಾಕೊಲೇಟ್ ಕಾಯಿನ್ಸ್ (ಹಳದಿ ಬಣ್ಣದ ಕವರ್ ಇರುವ) ಖರೀದಿಸಿ, ಯಾರಿಗೂ ಗೊತ್ತಾಗದಂತೆ ಜಮೀನಿನಲ್ಲಿ ಮುಂಚಿತವಾಗಿ ಹೂತಿಟ್ಟಿದ್ದ.ನಂತರ ವಿಡಿಯೊ ಚಿತ್ರೀಕರಣ ಮಾಡಿಸಿಕೊಂಡು, ಬಿಂದಿಗೆಯನ್ನು ಹೊರತೆಗೆದು ನಿಮ್ಮ ಪೂರ್ವಜರ ನಿಧಿ ನನಗೆ ದಕ್ಕವುದಿಲ್ಲ. ಆದರೆ ಹಣ ಕೊಟ್ಟರೆ ಈ ಬಿಂದಿಗೆ ನಿಮ್ಮದು ಎಂದು ಸಣ್ಣಬಸಪ್ಪ, ದೊಡ್ಡಬಸಪ್ಪ ಅವರನ್ನು ನಂಬಿಸಿದ್ದನು ಎನ್ನಲಾಗಿದೆ.