ಮಳೆ ಹಾನಿ ಪರಿಹಾರದಲ್ಲಿ ವಿಳಂಬ ಸಹಿಸುವುದಿಲ್ಲ; ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

Gadag DC Office meeting
Gadag DC Office meeting
Published on
ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಕುಡಿಯುವ ನೀರಿನ ಪೂರೈಕೆ, ಮಳೆ ಹಾನಿ ಪರಿಹಾರ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೀಜ ಹಾಗೂ ಗೊಬ್ಬರಗಳ ಲಭ್ಯತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮಳೆಯಿಂದ ಉಂಟಾಗುವ ಹಾನಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ, ನಿರ್ಲಕ್ಷ್ಯ ಅಥವಾ ನಿಷ್ಕಾಳಜಿಯನ್ನು ಜಿಲ್ಲಾಡಳಿತ ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ಬುಧವಾರ (ಜೂ.3) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಸಿದ್ಧತೆ, ಮುಂಗಾರು ಮಳೆಯ ಪರಿಣಾಮ, ಕುಡಿಯುವ ನೀರಿನ ಸ್ಥಿತಿ, ಬೆಳೆ ಹಾನಿ, ಮನೆ ಹಾನಿ ಹಾಗೂ ಪರಿಹಾರ ವಿತರಣೆಯ ಪ್ರಗತಿ ಕುರಿತು ಸುದೀರ್ಘ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸಭೆಗೆ ಸಂಪೂರ್ಣ ಹಾಗೂ ನಿಖರ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಸೂಚಿಸಿದರು.
ಸಭೆಗೆ ಸುಳ್ಳು ಅಥವಾ ಅಪೂರ್ಣ ಮಾಹಿತಿ ನೀಡುವುದು ಗಂಭೀರ ವಿಷಯವಾಗಿದ್ದು, ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ತಾಲ್ಲೂಕುವಾರು ಮಳೆಯಿಂದ ಹಾನಿಗೀಡಾದ ಮನೆಗಳು, ಬೆಳೆಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಕುರಿತು ಮಾಹಿತಿ ಪಡೆದು, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪರಿಹಾರ ವಿತರಣೆಯಲ್ಲಿ ವಿಳಂಬ ಉಂಟಾಗುವುದು ಸಂತ್ರಸ್ತರಿಗೆ ಮತ್ತಷ್ಟು ತೊಂದರೆ ಉಂಟುಮಾಡುವುದರಿಂದ ಈ ವಿಷಯದಲ್ಲಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಸೂಚಿಸಿದರು.
ಮಳೆಯಾಗುವ ಸಂದರ್ಭದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಜನ ಹಾಗೂ ಜಾನುವಾರುಗಳ ಜೀವಹಾನಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಹಾನಿಯ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂಚಿತ ಸಿದ್ಧತೆ ಹಾಗೂ ತುರ್ತು ಸ್ಪಂದನೆ ಅತ್ಯಂತ ಅಗತ್ಯವಾಗಿದೆ. ಯಾವುದೇ ಘಟನೆ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯತ್ಯಯವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು. ಗ್ರಾಮೀಣ ಪ್ರದೇಶಗಳ ಜೊತೆಗೆ ನಗರ ಪ್ರದೇಶಗಳಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸಿ‌ ಎನ್ ಶ್ರೀಧರ ಸೂಚಿಸಿದರು.
ಪ್ರವಾಹ ಉಂಟಾಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಮುಂಚಿತವಾಗಿ ಗುರುತಿಸಿ, ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕುರಿತು ಸೂಚನೆ ನೀಡಬೇಕು. ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ 23 ಕೆರೆಗಳ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕೆರೆಗಳ ನಿರ್ವಹಣೆ ಹಾಗೂ ನೀರು ಸಂಗ್ರಹ ಸಾಮರ್ಥ್ಯ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಕೆರೆಗಳಿಗೆ ನೀರು ತುಂಬಿಸಲು ಹಾಗೂ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾದ ಅನುದಾನದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಪ್ರವಾಹ ಸೇರಿದಂತೆ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಸಲು ಅಗ್ನಿಶಾಮಕ ಇಲಾಖೆಗೆ ಅಗತ್ಯವಿರುವ ಬೋಟ್‌ಗಳ ಖರೀದಿಗಾಗಿ ಸೂಕ್ತ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಮೇ 18ರಂದು ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಗದಗ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ತಲಾ ಒಬ್ಬರಂತೆ ಒಟ್ಟು 2 ಜನರು ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಮಳೆಯಿಂದ ಮೃತಪಟ್ಟ 31 ಸಣ್ಣ ಸಾಕು ಪ್ರಾಣಿಗಳ ಮಾಲೀಕರಿಗೆ ಒಟ್ಟು ₹1.52 ಲಕ್ಷ ಪರಿಹಾರ ನೀಡಲಾಗಿದೆ.
ಪ್ರಸಕ್ತ ಸಾಲಿನ ಪೂರ್ವ ಮುಂಗಾರು ಮಳೆಯಿಂದ ಜಿಲ್ಲೆಯಲ್ಲಿ ಇದುವರೆಗೆ 14 ಮನೆಗಳು ಭಾಗಶಃ ಹಾನಿಗೀಡಾಗಿದ್ದು, ಸಂಬಂಧಿಸಿದ ಕುಟುಂಬಗಳಿಗೆ ಒಟ್ಟು ₹91 ಸಾವಿರ ಪರಿಹಾರ ವಿತರಿಸಲಾಗಿದೆ. ಅಲ್ಲದೇ 96 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಆ ಕುಟುಂಬಗಳಿಗೆ ಒಟ್ಟು ₹4.80 ಲಕ್ಷ ಪರಿಹಾರವನ್ನು ನೀಡಲಾಗಿದೆ.
ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ 907 ವಿದ್ಯುತ್ ಕಂಬಗಳು ಹಾಗೂ 10 ಶಾಲಾ ಕೊಠಡಿಗಳು ಹಾನಿಗೀಡಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಮಾನದಂಡಗಳ ಪ್ರಕಾರ ಈ ಹಾನಿಯ ಅಂದಾಜು ಮೊತ್ತ ₹69.35 ಲಕ್ಷ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅದೇ ರೀತಿ ಜಿಲ್ಲೆಯ 92 ರೈತರಿಗೆ ಸೇರಿದ 34.58 ಎಕರೆ ತೋಟಗಾರಿಕೆ ಪ್ರದೇಶ ಮಳೆಯಿಂದ ಹಾನಿಗೀಡಾಗಿದ್ದು, ಇದರ ಹಾನಿಯ ಮೌಲ್ಯವನ್ನು NDRF ಮಾನದಂಡಗಳ ಪ್ರಕಾರ ₹6.70 ಲಕ್ಷ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ನವಿಲುತೀರ್ಥ ಜಲಾಶಯದಲ್ಲಿ ಪ್ರಸ್ತುತ 5.905 ಟಿಎಂಸಿ, ಭದ್ರಾ ಜಲಾಶಯದಲ್ಲಿ 16.497 ಟಿಎಂಸಿ ಹಾಗೂ ಹಮ್ಮಿಗಿ ಬ್ಯಾರೇಜ್‌ನಲ್ಲಿ 1.978 ಟಿಎಂಸಿ ನೀರು ಸಂಗ್ರಹವಿದೆ ಎಂದು ತಿಳಿಸಿದರು. ಲಭ್ಯವಿರುವ ನೀರಿನ ಸಂಗ್ರಹದಿಂದ ಮುಂದಿನ 90 ದಿನಗಳವರೆಗೆ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ 63 ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಅಲ್ಲಿ ವಿಶೇಷ ನಿಗಾವಹಿಸಿ ನೀರು ಪೂರೈಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ನಗರ ಪ್ರದೇಶಗಳಲ್ಲಿ ಗದಗ-ಬೆಟಗೇರಿ ನಗರಸಭೆಯ 35 ವಾರ್ಡುಗಳು ಸೇರಿದಂತೆ ಜಿಲ್ಲೆಯ ಒಟ್ಟು 69 ವಾರ್ಡುಗಳನ್ನು ಸಮಸ್ಯಾತ್ಮಕ ಪ್ರದೇಶಗಳೆಂದು ಗುರುತಿಸಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 204 ವಾರ್ಡುಗಳಲ್ಲಿ ಒಟ್ಟು 1,196 ಬೋರ್‌ವೆಲ್‌ಗಳಿದ್ದು, ಅವುಗಳಲ್ಲಿ 923 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ 51 ಆರ್‌ಒ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಪೈಕಿ 35 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ ಸೇರಿದಂತೆ ಒಟ್ಟು 67,536 ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆಯಿದ್ದು, ಇದುವರೆಗೆ 18,963 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. ಪ್ರಸ್ತುತ 14,688 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರಗೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಡಿಡಿಪಿಐ ಆರ್.ಎಸ್. ಬುರಡಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣನವರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net