ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ ಭಾವ ಶುಚಿ ಎಂಬ ಅಕ್ಕಮಹಾದೇವಿಯ ವಚನವು ಇಂದಿಗೂ ಪ್ರಸ್ತುತವಾಗಿದೆ ಎಂದು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸುರು ಹೇಳಿದರು.
ಅಕ್ಕಮಹಾದೇವಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಜರುಗಿದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ನಡೆ-ನುಡಿ, ತನು-ಮನ, ಭಾವಗಳಿಂದ ಪರಿಶುದ್ಧರಾಗಿರುವವರು ಬಹು ವಿರಳ, ಸ್ವಾರ್ಥ, ವಂಚನೆ, ಮೋಸ ಅರಿಷಡ್ವರ್ಗಗಳ ಭಾವನೆ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಕ್ಕಮಹಾದೇವಿ ತಿಳಿಸಿರುವಂತೆ ನಾವೆಲ್ಲರೂ ನಮ್ಮ ನಡೆ-ನುಡಿ, ತನು-ಮನ-ಭಾವಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಅಂದಾಗ ಸಮಾಜದ ಸ್ವಾಸ್ಥ್ಯ ಉತ್ತಮಗೊಳ್ಳುವುದು. ಎಂದರು.
ಮಹಾದೇವಿ ಚರಂತಿಮಠ ಮಾತನಾಡಿ ವೈರಾಗ್ಯನಿಧಿ, ಮಹಾಸಾಧ್ವಿ ಶಿರೋಮಣಿ ಅಕ್ಕಮಹಾದೇವಿಯ ತ್ಯಾಗ, ದಿಟ್ಟ ನಿಲುವು, ಆತ್ಮ ಸಂಯಮ ಇನ್ನಿತರೆ ಮನೋಭಾವಗಳನ್ನು ಇಂದಿನ ಸ್ತ್ರಿ ಕುಲ ರೂಢಿಸಿಕೊಂಡರೆ ಈಗಿರುವ ಸಮಸ್ಯೆ, ಸಂಕಷ್ಟಗಳು ದೂರಾಗುತ್ತವೆ. ಹೆಣ್ಣು ಮಕ್ಕಳು ತಮ್ಮ ವೇಷ ಭೂಷಣ, ಆಹಾರ ವಿಹಾರ, ಆಚಾರ ವಿಚಾರ, ರೀತಿ ನೀತಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿದರೆ ಸುಸಂಸ್ಕೃತ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಆಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಕೂಡ ಸಹಕರಿಸಬೇಕು ಎಂದರು.
ಗೌರಿ ಜಿರಂಕಳಿ, ಸುನಂದಾ ಜ್ಯಾನೋಪಂತರ, ನಾಗಮ್ಮ ಕೆ, ಶೋಬಾ ಭಾಂಡಗೆ, ವೀಣಾ ಅಕ್ಕಿ, ಗಿರಿಜಾ ಅಂಗಡಿ, ಪ್ರತಿಭಾ ಇನಾಮತಿ, ಅರುಣಾ ಇಂಗಳಲ್ಲಿ, ವಿಜಯಲಕ್ಷ್ಮೀ ಮುಗಳಿ ಇತರರು ಇದ್ದರು.