ಉಗ್ರ ಚಟುವಟಿಕೆಗಳಿಗೆ ಧನಸಹಾಯವೇ ಆಮ್ಲಜನಕ|High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ ಅವಲೋಕನ
  • ಹಣ ಒದಗಿಸುವ ಮಾರ್ಗಗಳ ನಾಶ ಅಗತ್ಯ ಎಂದು ಅಭಿಪ್ರಾಯ
ಬೆಂಗಳೂರು: ರಾಷ್ಟ್ರಿಯ ಭದ್ರತೆಗಿರುವ ಗಂಭೀರ ಬೆದರಿಕೆ ಎಂದರೆ ಉಗ್ರಗಾಮಿ ಚಟುವಟಿಕೆಗಳಿಗೆ ರಹಸ್ಯವಾಗಿ ಧನಸಹಾಯ ಮಾಡುವುದಾಗಿದೆ. ಇಂತಹ ಪ್ರಕ್ರಿಯೆ ಉಗ್ರ ಚುಟುವಟಿಕೆಗಳಿಗೆ ಆಮ್ಲಜನಕವಾಗಿ ದೇಶಾದ್ಯಂತ ಹರಡಲು ಸಹಾಯ ಮಾಡುತ್ತದೆ ಎಂದು ಹೈಕೋರ್ಟ್​ ಹೇಳಿದೆ. 
ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ಅಕ್ರಮವಾಗಿ ಹಣ ಹಂಚಿಕೆ ಮಾಡಿದ ಆರೋಪದಲ್ಲಿ ಅಮೆರಿಕ ಮೂಲದ "ದಿ ತಿಮೋತಿ ಇನಿಶಿಯೇಟಿವ್​' ಮಿಷನರಿ ಸಂಸ್ಥೆ ಹಾಗೂ ಮತ್ತದರ ಪದಾಧಿಕಾರಿಗಳ ವಿರುದ್ಧ ಬೆಂಗಳೂರಿನ ಕೊತ್ತನೂರು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್​ ಬುಧವಾರ ನಿರಾಕರಿಸಿದೆ. ಅದರ ಆದೇಶ ಪ್ರತಿ ಲಭ್ಯವಾಗಿದ್ದು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅತ್ಯಂತ ಗಂಭೀರ ಅವಲೋಕನ ಮಾಡಿದ್ದಾರೆ. 
ಒಂದು ವೇಳೆ ಇಂತಹ ಹಣದ ಹರಿವನ್ನು ತಡೆಯದೇ ಬಿಟ್ಟರೆ, ಅದು ಸೈದ್ಧಾಂತಿಕವಾಗಿರುವ ಉಗ್ರಗಾಮಿ ಮನಸ್ಥಿತಿಯನ್ನು ಅತ್ಯಂತ ಅಪಾಯಕಾರಿಯಾದ ಸಂಟಿತ ಹಿಂಸಾಚಾರವಾಗಿ ಮಾರ್ಪಡಿಸುತ್ತದೆ. ಇದು ನೇರವಾಗಿ ರಾಷ್ಟ್ರೀಯ ಐಕ್ಯತೆಗೆ ಮತ್ತು ಸಾರ್ವಜನಿಕ ಭದ್ರತೆಗೆ ದೊಡ್ಡ ಸವಾಲಾಗುತ್ತದೆ. ದೇಶದ ಭದ್ರತೆ, ಸ್ಥಿರತೆ ಮತ್ತು ಸಾಂವಿಧಾನಿಕ ಸುವ್ಯವಸ್ಥೆಯು ಒಂದು ಅದೃಶ್ಯ ರಚನೆಯ ಮೇಲೆ ನಿಂತಿರುತ್ತದೆ. ಅದನ್ನು ಕಾಪಾಡಬೇಕಾದರೆ ಉಗ್ರ ಚಟುವಟಿಕೆಗಳಿಗೆ ಧನಸಹಾಯ ಒದಗಿಸುವ ಮಾರ್ಗಗಳನ್ನು ನಾಶಗೊಳಿಸುವುದು ಅಗತ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತನಿಖೆ ಅನಿವಾರ್ಯ:

ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಮತ್ತು ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಗಂಭಿರ ಆರೋಪಗಳು ಕೇಳಿ ಬಂದಾಗ, ಸೂಕ್ತ ತನಿಖೆ ನಡೆಸಿ ಸತ್ಯ ಪತ್ತೆ ಹಚ್ಚುವುದು ಕೇವಲ ಕಾನೂನಾತ್ಮಕ ಪ್ರಕ್ರಿಯೆಯಲ್ಲ. ಬದಲಾಗಿ ಅದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅನಿವಾರ್ಯವಾಗಿದೆ ಮತ್ತು ತನಿಖಾ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
⚠️

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ? 

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಷನರಿ ಸಂಸ್ಥೆ ಸದಸ್ಯ ಮೈಕಾ ಮಾರ್ಕ್​ ಎಂಬಾತ 24 ಡೆಬಿಟ್​ ಕಾರ್ಡ್​ಗಳೊಂದಿಗೆ ಸಿಕ್ಕಿಬಿದ್ದಾಗ ಹಗರಣ ಬೆಳಕಿಗೆ ಬಂದಿತ್ತು. ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಅಮೆರಿಕದ ಬ್ಯಾಂಕ್​ನಿಂದ ನೀಡಲಾಗಿದ್ದ ಸಾವಿರಕ್ಕೂ ಅಧಿಕ ಡೆಬಿಟ್​ ಕಾರ್ಡ್​ಗಳನ್ನು ಸಂತೋಷ್​ಕುಮಾರ್​ ಎಂಬ ನಕಲಿ ಹೆಸರಿನಲ್ಲಿ ಮುದ್ರಿಸಿ ದೇಶದಲ್ಲಿ ವಿತರಿಸಿದ್ದು, ಪತ್ತೆಯಾಗಿತ್ತು. ಈ ಕಾರ್ಡ್​ಗಳನ್ನು ಬಳಸಿ 92.55 ಕೋಟಿ ವಿದೇಶಿ ಹಣವನ್ನು ಎಟಿಎಂಗಳ ಮೂಲಕ ಅಕ್ರಮವಾಗಿ ಡ್ರಾ ಮಾಡಲಾಗಿತ್ತು. ಈ ಹಣವನ್ನು ಎಡಪಂಥೀಯ ಉಗ್ರಗಾಮಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಇ.ಡಿ. ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಮಾಹಿತಿ ಹಂಚಿಕೆಗೆ ಅವಕಾಶ

ಜಾರಿ ನಿರ್ದೇಶನಾಲಯಕ್ಕೆ ಕೇವಲ ಆರ್ಥಿಕ ಅಪರಾಧಗಳ ತನಿಖೆಯ ಅಧಿಕಾರ ಮಾತ್ರ ಇರುವುದಲ್ಲ. ತನಿಖೆಯ ವೇಳೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗಳಂತಹ (ಯುಎಪಿಎ) ಗಂಭೀರ ಕಾಯ್ದೆಗಳ ಉಲ್ಲಂನೆ ಕಂಡು ಬಂದರೆ, ಆ ಮಾಹಿತಿಯನ್ನು ಪೊಲೀಸರಿಗೆ ಅಥವಾ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳುವ ಅಧಿಕಾರವು ಪಿಎಂಎಲ್​ಎ ಕಾಯ್ದೆಯ ಅಡಿಯಲ್ಲಿ ಇಡಿಗೆ ಇದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮಿಷನರಿ ಸಂಸ್ಥೆಯ ವಾದವೇನಿದೆ?

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಆರೋಪಿಗಳು ಬಡವರ ಪರ ಸೇವೆ ಸಲ್ಲಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಲ್ಲವಾದರೂ, ಇದನ್ನು ಭಯೋತ್ಪಾದಕ ಚಟುವಟಿಕೆ ಎಂದು ಬಿಂಬಿಸಲು ಯುಎಪಿಎ ಕಾಯ್ದೆ ಅಡಿ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಗಂಭೀರ ಆರೋಪಗಳನ್ನು ಹೊರಿಸಲು ಯಾವುದೇ ಆಧಾರ ಇಲ್ಲ. ಅಲ್ಲದೆ, ಇ.ಡಿ. ಯು ಪಿಎಂಎಲ್​ಎ ಮತ್ತು ವಿದೇಶಿ ವಿನಿಮಯ ಕಾಯ್ದೆ ಅಡಿಯಲ್ಲಿ ಮಾತ್ರ ಕೆಲಸ ಮಾಡಬೇಕು. ಆದರೆ, ಅದನ್ನು ಮೀರಿ ಪೊಲೀಸರಿಗೆ ದೂರು ನೀಡಿರುವುದು ಕಾನೂನುಬಾಹಿರ. ಇ.ಡಿ. ಕಸ್ಟಡಿಯಲ್ಲಿ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ನಂತರ ಪ್ರತಿಕಾರವಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net