ವಿಕಸಿತ ಕರ್ನಾಟಕದಿಂದ ವಿಕಸಿತ ಭಾರತ: ಬರ ನೆರವು, ಕಬ್ಬು, ಕಸ್ತೂರಿ ರಂಗನ್​, ಮೇಕೆದಾಟಿಗೆ ಸ್ಪಂದನೆ

ನಮ್ಮ ಮೆಟ್ರೋದ ಪಿಂಕ್​ ಲೈನ್​ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಡಿ.ಕೆ. ಶಿವಕುಮಾರ್​ ಹಸಿರು ನಿಶಾನೆ ತೋರಿದರು. ಸಚಿವ ಕೃಷ್ಣಬೈರೇಗೌಡ ಇದ್ದರು.
ನಮ್ಮ ಮೆಟ್ರೋದ ಪಿಂಕ್​ ಲೈನ್​ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಡಿ.ಕೆ. ಶಿವಕುಮಾರ್​ ಹಸಿರು ನಿಶಾನೆ ತೋರಿದರು. ಸಚಿವ ಕೃಷ್ಣಬೈರೇಗೌಡ ಇದ್ದರು.
Published on: 
Summary
  • ಪ್ರಧಾನಿ ಮೋದಿ&-ಸಿಎಂ ಡಿಕೆಶಿ ಅಭಿವೃದ್ಧಿ ಬಂಧ

  • ನಮ್ಮ ಮೆಟ್ರೋ ಪಿಂಕ್​ ಲೈನ್​ಗೆ ಹಸಿರು ನಿಶಾನೆ

  • ಮೈಸೂರು ತಾರಾಲಯ ಉದ್ಘಾಟನೆ

ಬೆಂಗಳೂರು/ಮೈಸೂರು: ಕೇಂದ್ರ ಸರ್ಕಾರ ಪುರಸ್ಕೃತ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಹಸಿರು ನಿಶಾನೆ ತೋರುವ ಉದ್ದೇಶದಿಂದ ಶುಕ್ರವಾರ ಕರ್ನಾಟಕ ಪ್ರವಾಸ ಕೈಗೊಂಡು ಬೆಂಗಳೂರು, ಮೈಸೂರು ನಗರಕ್ಕೆ ಭೇಟಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ "ವಿಕಸಿತ ಕರ್ನಾಟಕದಿಂದ ವಿಕಸಿತ ಭಾರತ' ಎಂದು ಹೊಗಳುತ್ತಲೇ ರಾಜ್ಯಕ್ಕೆ ಕೇಂದ್ರ ಕೊಟ್ಟಿರುವ ಕೊಡುಗೆಗಳ ರಿಪೋರ್ಟ್​ ಕಾರ್ಡ್​ ಮುಂದಿಟ್ಟರು.

ಇದೇ ವೇಳೆ ಸಿಎಂ ಡಿ.ಕೆ. ಶಿವಕುಮಾರ್​ ಅವರು 22 ಸಾವಿರ ಕೋಟಿ ರೂ. ಬರ ಪರಿಹಾರ, ನಮ್ಮ ಮೆಟ್ರೋ ಯೋಜನೆಗೆ ಹೆಚ್ಚಿನ ಯೋಜನಾ ವೆಚ್ಚದ ಕೋರಿಕೆ, ಕಬ್ಬು ಬೆಳೆಗಾರರಿಗೆ ನೆರವು, ಮೇಕೆದಾಟು ಯೋಜನೆಗೆ ಸಹಕಾರ ನೀಡುವುದೂ ಸೇರಿದಂತೆ ರಾಜ್ಯದ ರೈತರು, ನಾಗರಿಕರ ಪರವಾಗಿ ಪ್ರಧಾನಿ ಎದುರು ಹಕ್ಕೊತ್ತಾಯ ಮಂಡಿಸಿದರು. ಎಲ್ಲ ಕಾರ್ಯಕ್ರಮಗಳಲ್ಲೂ ಪ್ರಧಾನಿ, ಸಿಎಂ ನಗುನಗುತ್ತಲೇ ಸ್ನೇಹಪೂರ್ವಕವಾಗಿ ಕಾಣಿಸಿಕೊಂಡಿದ್ದು ಒಂದೆಡೆಯಾದರೆ, ಉಭಯ ನಾಯಕರಿಂದ ಪರಸ್ಪರ ಸಹಕಾರ, ಸಮನ್ವಯ, ಸಹಭಾಗಿತ್ವದ ಮಾತು ಕೇಳಿಬಂದಿದ್ದು ವಿಶೇಷ.

ಡಾ. ರಾಜ್​ಕುಮಾರ್​ ಸ್ಮರಣೆ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಯೋಗಕ್ಕೆ ವರನಟ ಡಾ.ರಾಜ್​ ಕುಮಾರ್​ ನೀಡಿದ ಕೊಡುಗೆ ಸ್ಮರಿಸಿದರು. ಬೆಂಗಳೂರು ತಾಯಿ ಅಣ್ಣಮ್ಮನಿಗೆ ನಮಿಸಿದ ಮೋದಿ ಮೈಸೂರಿನ ಭಾಷಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರನ್ನು ನೆನೆದಿದ್ದು ವಿಶೇಷ.

ಪ್ರಧಾನಿ ಎದುರು ಡಿಕೆಶಿ ಮುಂದಿಟ್ಟ ಬೇಡಿಕೆ ಪಟ್ಟಿ

ದೇಶದ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ. ದೇಶದ ಅಭಿವೃದ್ಧಿ ಪಯಣದಲ್ಲಿ ಕರ್ನಾಟಕವೂ ಸಂಪೂರ್ಣ ಕೊಡುಗೆ ನೀಡಲು ಸಿದ್ಧವಿದೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್​, ಬಿನ್ನಹಗಳನ್ನು ಮುಂದಿಟ್ಟರು. ಸ್ವಾಮಿ ವಿವೇಕಾನಂದರು ಸಾರಿದ ಸಂದೇಶದಂತೆ, ಸಂಕುಚಿತ ಗಡಿ ಮೀರಿ ಎಲ್ಲರ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು. ರಾಜಕೀಯದಲ್ಲಿ ಪರಸ್ಪರ ಸ್ಪರ್ಧಿಸೋಣ. ಆದರೆ ಅಭಿವೃದ್ಧಿಯ ವಿಚಾರದಲ್ಲಿ ಒಟ್ಟಾಗಿ ಸಹಕರಿಸೋಣ. ಕರ್ನಾಟಕವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ. ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸೋಣ ಎಂದರು.

ಕರ್ನಾಟಕ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯದ ಒಟ್ಟು 246 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 85 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ. 62 ಸಾವಿರ ಕೋಟಿ ರೂ. ನಷ್ಟ ಉಂಟಾಗಿದ್ದು, ಎನ್​ಡಿಆರ್​ಎಫ್​ ಅಡಿಯಲ್ಲಿ 22 ಸಾವಿರ ಕೋಟಿ ರೂ. ಪರಿಹಾರ ನೀಡಬೇಕು.

ಡಿಕೆಶಿ ಕೇಳಿದ್ದು

  • 22 ಸಾವಿರ ಕೋಟಿ ರೂ. ಬರಪರಿಹಾರ ಕೊಡಿ

  • ಕಸ್ತೂರಿ ರಂಗನ್​ ವರದಿ ಆತಂಕ ದೂರ ಮಾಡಿ

  • ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ನೆರವು ನೀಡಿ

  • ಎಥೆನಾಲ್​ ಅನುದಾನ ಕೊಡಲು ಕ್ರಮಕೈಗೊಳ್ಳಿ

  • ಕೊಡುಗೆಯ ರಿಪೋರ್ಟ್​ ಕಾರ್ಡ್​ ಕೊಟ್ಟ ಮೋದಿ

ಕೊಡುಗೆಯ ರಿಪೋರ್ಟ್​ ಕಾರ್ಡ್​ ಕೊಟ್ಟ ಮೋದಿ

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸಹಕಾರ ನೀಡುತ್ತದೆ ಎಂಬ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ಮಾತು ಶುರು ಮಾಡಿದ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಪಟ್ಟಿ ಮುಂದಿಟ್ಟರು. ಬೆಂಗಳೂರು ನಗರದ ತ್ವರಿತ ಅಭಿವೃದ್ಧಿ ಮತ್ತು ಆಧುನಿಕ ಸಾರ್ವಜನಿಕ ಮೂಲಸೌಕರ್ಯಗಳ ವಿಸ್ತರಣೆ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಭರವಸೆ ನೀಡಿದರು.

ದೂರದೃಷ್ಟಿಯೊಂದಿಗೆ ನಮ್ಮ ಮೆಟ್ರೋ ವಿಸ್ತರಣೆಗೆ ಕೇಂದ್ರ ಸಹಕಾರ ನೀಡುತ್ತಿದೆ, 2014ರಲ್ಲಿ ನಮ್ಮ ಮೆಟ್ರೋ 17 ಕಿ. ಮೀ ಉದ್ದದ ಜಾಲ ಹೊಂದಿತ್ತು. 100 ಕಿ. ಮೀ. ಮೀರಿ ವಿಸ್ತರಿಸಿದೆ.

ಇಂಧನ ಭದ್ರತೆಗೆ 15 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ ಲಭಿಸಿದೆ. ಇವೆಲ್ಲವೂ ಕರ್ನಾಟಕದ ಮೂಲಸೌಕರ್ಯ ವ್ಯವಸ್ಥೆಗೆ ಹೊಸ ಶಕ್ತಿ ತುಂಬಲಿವೆ. ಇದರಿಂದ ಶಿಕ್ಷಣ ಸಂಸ್ಥೆಗಳು, ಉದ್ಯಮ, ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರಗಳು ಬೆಳೆಯಲಿವೆ.

ಮೋದಿ ಮೋಡಿ

15,600 ಕೋಟಿ ರೂ.ಗಳ ಯೋಜನೆಗೆ ಚಾಲನೆ

ಡಿಕೆಶಿಯ ಕೈ ಹಿಡಿದು ಮೆಟ್ರೋಗೆ ಹಸಿರು ನಿಶಾನೆ

ಒಟ್ಟಿಗೆ ಪ್ರಯಾಣಿಸಿ ಚಿಂತನೆ ವಿಚಾರ ವಿನಿಮಯ

ಮೈಸೂರಿನಲ್ಲೂ ಸಿಕ್ತು ಪ್ರಧಾನಿಗೆ ಭರ್ಜರಿ ಸ್ವಾಗತ

ಮೋದಿ ಕ್ಷಣಕ್ಷಣ..

  • ರಾಜಧಾನಿ ಜನತೆಯಿಂದ ಪ್ರಧಾನಿ ನರೇಂದ್ರ ಮೋದಿಗೆ ಹೂಮಳೆಯ ಸ್ವಾಗತ

  • ಬೆಂಗಳೂರಿನಲ್ಲಿ ಮೆಟ್ರೋ ಪಿಂಕ್​ ಲೈನ್​ ಮಾರ್ಗ ಲೋಕಾರ್ಪಣೆ, ಒಟ್ಟು 15,600 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

  • ಮಂಗಳೂರಿನ ಭೂಗತ ಎಲ್ಪಿಜಿ ಸಂಗ್ರಹಣಾ ಘಟಕ ಮತ್ತು ಬೆಂಗಳೂರಿನ ಮಾರ್ಕೆಟಿಂಗ್​ ಟರ್ಮಿನಲ್​ ಯೋಜನೆಗಳಿಗೆ ಚಾಲನೆ

  • ಬೆಂಗಳೂರಿನ ಜಿಗಣಿ ಬಳಿ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿ

  • ಮೈಸೂರಿನಲ್ಲಿ ಭಾರತದ ಮೊದಲ ತೂಗುವ (ಟಿಲ್ಟೆಡ್​) ಎಲ್​ಇಡಿ ತಾರಾಲಯ & ಕಾಸ್ಮೋಸ್​ ಮೈಸೂರು ಪ್ಲಾನಿಟೋರಿಯಂ ಉದ್ಘಾಟನೆ