* ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ನಾಲ್ಕು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು, 2025ನೇ ಸಾಲಿಗೆ ಪುರಸ್ಕೃತರ ಹೆಸರು ಪ್ರಕಟಿಸಿದೆ.
‘ಡಾ. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ’ಗೆ ಶಿವಮೊಗ್ಗದ ಆಶಿಕ್ ಶಂಕರಘಟ್ಟ (ಬೆಂಗಳೂರು ವಿಭಾಗ), ‘ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ’ಗೆ ಮೈಸೂರಿನ ಡಾ. ಎಚ್. ಬಿ. ಬೆಟ್ಟಸ್ವಾಮಿ (ಮೈಸೂರು ವಿಭಾಗ), ‘ಗಳಗನಾಥ ಪ್ರಶಸ್ತಿ’ಗೆ ಹಾವೇರಿಯ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ (ಬೆಳಗಾವಿ ವಿಭಾಗ) ಹಾಗೂ ‘ಡಾ. ಹಾ.ಮಾ. ನಾಯಕ ಪ್ರಶಸ್ತಿ’ಗೆ ಕಲಬುರಗಿಯ ಡಾ. ಎನ್. ಶೈಲಜಾ (ಕಲಬುರಗಿ ವಿಭಾಗ) ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿಯಲ್ಲಿ ವಿಶಿಷ್ಟ ಹಾಗೂ ಉತ್ತಮ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಿದವರಿಗೆ ಈ ಪ್ರಶಸ್ತಿಗಳನ್ನು ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿಗಳ ಜತೆಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದ್ದಾರೆ.