

ಬೆಂಗಳೂರು: ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಎಂ. ಸೋಮಯ್ಯ ಅವರ ಮನೆಗೆ ಕನ್ನ ಹಾಕಿರುವ ಕಳ್ಳರು ಬೆಲೆ ಬಾಳುವ ಪದಕ, ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇಂದಿರಾನಗರದ ತಿಪ್ಪಸಂದ್ರದ ಹೆಚ್.ಎ.ಎಲ್ 3ನೇ ಹಂತದಲ್ಲಿ ವಾಸವಾಗಿದ್ದ ಸೋಮಯ್ಯ ಹಾಗೂ ಅವರ ಕುಟುಂಬಸ್ಥರು ಅ.25ರಂದು ಕೊಡಗಿಗೆ ಹೋಗಿದ್ದರು. ಈ ವೇಳೆ ಮನೆಯ ಬೀಗ ಮುರಿದು ಒಳಗೆ ನುಗ್ಗಿದ್ದ ಕಳ್ಳರು 1980ರ ದಶಕದಲ್ಲಿ ಮಾಸ್ಕೋ ಒಲಿಂಪಿಕ್ನಲ್ಲಿ ಗೆದ್ದಿದ್ದ ಚಿನ್ನದ ಪದಕ, 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯಾ ಗೇಮ್ಸ್ನಲ್ಲಿನ ಸಿಲ್ವರ್ ಪದಕ, 1986ರಲ್ಲಿ ಮೆಡಲ್, 30 ಸಾವಿರ ಮೌಲ್ಯದ 144 ಗ್ರಾಂ ತೂಕದ ಎರಡು ಬೆಳ್ಳಿ ಟ್ರೋಫಿಗಳು, 1.30 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ, 45 ಸಾವಿರ ರೂ. ಬೆಲೆಯ 200 ಗ್ರಾಂ ತೂಕದ ಆರು ಬೆಳ್ಳಿ ಸ್ಪೂನ್ಗಳು, 18 ಸಾವಿರ ರೂ. ಬೆಲೆಯ 80 ಗ್ರಾಂ ತೂಕದ ಬೆಳ್ಳಿ ಪಾರ್ಟ್ಸ್, 1 ಲಕ್ಷ ರೂ. ಬೆಲೆಯ 8 ಗ್ರಾಂ ಚಿನ್ನದ ಕಾಯಿನ್ ಹಾಗೂ 30 ಸಾವಿರ ರೂ. ನಗದು ದೋಚಿದ್ದು, ಇವುಗಳ ಒಟ್ಟು ಮೌಲ್ಯ 3.53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೇರೆ:
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ವೇಳೆ ಸಿಸಿ ಕ್ಯಾಮರಾದಲ್ಲಿ ಕಳ್ಳತನ ದೃಶ್ಯ ಸರೆಯಾಗಿದೆ. ಅ.28ರಂದು ತಡರಾತ್ರಿ 2.34ಕ್ಕೆ ಮನೆಗೆ ನುಗ್ಗಿದ್ದ ಇಬ್ಬರು ಕಳ್ಳರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಆರೋಪಿಗಳ ಪತ್ತಗೆ ಎರಡು ವಿಶೇಷ ತಂಡ ರಚನೆ ಮಾಡಿರುವುದಾಗಿ ಇಂದಿರಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅ.28ರಂದು ಬೆಳಗ್ಗೆ ಪಕ್ಕದ ಮನೆಯ ನಿವಾಸಿ ನಾರಾಯಣ್ ಎಂಬುವವರು ಸೋಮಯ್ಯ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಕಳ್ಳತನವಾಗಿರಬಹುದೆಂದು ತಿಳಿದು ತಕ್ಷಣ ಅವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣ ವಾಪಸ್ ಬಂದ ಸೋಮಯ್ಯ ಅವರು ನೆರೆಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮನೆ ಕಳ್ಳತನವಾಗಿರುವುದು ತಿಳಿದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.