ಭಾಷೆ ಬೇರೆಯಾದ್ರೂ ಪ್ರೀತಿ ಒಂದೇ: ಬಿರಿಯಾನಿ ಸವಿಯುತ್ತಾ ಕನ್ನಡಿಗರ ಹೃದಯವಂತಿಕೆಗೆ ಸೋತ ನ್ಯೂಜಿಲೆಂಡ್ ಕಲಾವಿದ! Biryani Story

ಚಿತ್ರ Instagram
ಚಿತ್ರ Instagram
Published on
Biryani Story : ನ್ಯೂಜಿಲೆಂಡ್‌ ಮೂಲದ ಖ್ಯಾತ ಸಂಗೀತಗಾರ ಲೆಪಾನಿ ಇತ್ತೀಚಿಗೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ತಮಗಾದ ಹೃದಯಸ್ಪರ್ಶಿ ಅನುಭವವವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತದ ಅತಿಥಿ ಸತ್ಕಾರದ ಸೌಂದರ್ಯವನ್ನು ಶ್ಲಾಘಿಸಿದ್ದಾರೆ.

ವಿಡಿಯೋದಲ್ಲೇನಿದೆ?

ಭಾರತ ಒಂದು ಅದ್ಭುತ ಸ್ಥಳ. ನಾನು ಮೈಸೂರಿನ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ರಸ್ತೆಯ ಒಂದು ಭಾಗದಿಂದ ಬರುತ್ತಿದ್ದ ಅದ್ಭುತವಾದ ವಾಸನೆಯನ್ನು ಗಮನಿಸಿದೆ. ಈ ವೇಳೆ ಅಪರಿಚಿತ ಗುಂಪೊಂದು ನನಗೆ ಆಹ್ವಾನಿಸಿ ಉಚಿತವಾಗಿ ಬಿರಿಯಾನಿ ಮತ್ತು ಚಿಕನ್ ಕರಿ ಬಡಿಸಿದರು. ಆರಂಭದಲ್ಲಿ ನಾನು ಸ್ವಲ್ಪ ಹಿಂಜರಿದೆ ನಂತರ ಬಿರಿಯಾನಿಯನ್ನು ಸೇವಿಸಿದೆ ಎಂದರು.
ಈ ವೇಳೆ ಅವರನ್ನು ಒಂದು ತಟ್ಟೆಗೆ ಎಷ್ಟು ಎಂದು ಕೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಚಿಂತಿಸಬೇಡಿ, ಆರಾಮವಾಗಿ ಸೇವಿಸಿರಿ ಎಂದರು. ಆದಾಗ್ಯೂ, ನನ್ನ ಜೀವನದಲ್ಲಿ ಮೊದಲ ಬಾರಿ ಕೆಲವೊಂದು ಸ್ಥಳೀಯರ ಜೊತೆ ನಿಂತು ಆಹಾರ ಸೇವಿಸಿದ ಕ್ಷಣ ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅನೇಕ ಪ್ರತಿಕ್ರಿಯೆಯನ್ನು ಪಡೆಯಿತು. ಸಾಮಾಜಿಕ ಬಳಕೆದಾರರೊಬ್ಬರು ಭಾರತೀಯ ಜನರು ಸಹಾನುಭೂತಿ ಮತ್ತು ದಯೆಯಿಂದ ಇರುವಂತವರು, ಅವರು ತಮ್ಮ ಆಹಾರವನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು "COVID-19 ಭಾರತವನ್ನು ಅಪ್ಪಳಿಸಿದಾಗ, ಪ್ರತಿಯೊಬ್ಬರೂ ಕೊಡುಗೆ ನೀಡಿದರು. ಕೆಲವರು ವೈದ್ಯಕೀಯ ಸರಬರಾಜುಗಳನ್ನು ನಿರ್ವಹಿಸಿದರೆ, ಹೆಚ್ಚಿನವರು ಆಹಾರವನ್ನು ವಿತರಿಸುತ್ತಿದ್ದರು. ಬಡತನವಿರುವ ದೇಶದಲ್ಲಿ, ನಾವೆಲ್ಲರೂ ನಮ್ಮ ಸ್ವಂತ ಜನರ ಉದಾರ ಮನಸ್ಸಿನಿಂದ ಬದುಕುಳಿದೆವು ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ 'ಅತಿಥಿ ದೇವೋ ಭವ' ತತ್ವಕ್ಕೆ ಸಾಕ್ಷಿ

ಪಶ್ಚಿಮ ದೇಶಗಳಲ್ಲಿ ಅಪರಿಚಿತರೊಂದಿಗೆ ಇಷ್ಟು ಬೇಗ ಬೆರೆಯುವುದು ಅಪರೂಪ. ಆದರೆ ಭಾರತದ, ವಿಶೇಷವಾಗಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಜನರು ತೋರಿದ ಈ "ಆತ್ಮೀಯತೆ" ಲೆಪಾನಿ ಅವರ ಹೃದಯವನ್ನು ಗೆದ್ದಿದೆ. ಭಾರತಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿನ ಸ್ಮಾರಕಗಳು ನೆನಪಿನಲ್ಲಿ ಉಳಿಯುತ್ತವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿನ ಜನರ ಈ ನಿಷ್ಕಲ್ಮಶ ಪ್ರೀತಿ ಮಾತ್ರ ಸದಾ ಕಾಲ ಹಸಿರಾಗಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net