ಹೊಸಲಿಂಗಾಪುರದ ಹುಲಿಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಅತ್ಯಾಧುನಿಕ ಮೇಲ್ಸೇತುವೆಯನ್ನು ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ಭಾನುವಾರ ಉದ್ಘಾಟಿಸಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಅಧ್ಯಕ್ಷ ಪ್ರಸನ್ನ ಗಡಾದ್, ಪ್ರಮುಖರಾದ ವಿ.ಆರ್. ಪಾಟೀಲ್, ಗೂಳಪ್ಪ ಹಲಿಗೇರಿ, ಬಾಲಚಂದ್ರ ಮುನಿರಾಬಾದ್, ಗುರುರಾಜ್ ಹಲಿಗೇರಿ, ಪಾಲಾಕ್ಷಪ್ಪ ಗುಂಗಾಡಿ, ಯಂಕಪ್ಪ ಹೊಸಳ್ಳಿ, ವಿಶ್ವನಾಥ್ ರಾಜು, ಈರಣ್ಣ ಹುಲಿಗಿ ಇತರರಿದ್ದರು.
ಮುನಿರಾಬಾದ್:ಹೊಸಲಿಂಗಾಪುರದ ಹುಲಿಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ಮೇಲ್ಸೇತುವೆಯನ್ನು (ಫ್ಲೈಓವರ್) ಸಂಸದ ಕೆ. ರಾಜಶೇಖರ್ ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ಭಾನುವಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಾರ್ವಜನಿಕರು ಹಾಗೂ ವಾಹನ ಸವಾರರ ಬಹುದಿನಗಳ ಬೇಡಿಕೆ ಫ್ಲೈಓವರ್ ಈಗ ಲೋಕಾರ್ಪಣೆಗೊಂಡಿದೆ. ಈ ಮೊದಲು ವಾಹನ ದಟ್ಟಣೆ ಹೆಚ್ಚಾಗುತ್ತಿದ್ದರಿಂದ ರಸ್ತೆ ದಾಟಲು ಹರಸಾಹಸ ಪಡಬೇಕಾಗಿತ್ತು.
ಸರಣಿ ಅಪಘಾತಗಳು ಸಂಭವಿಸುತ್ತಿದ್ದವು. ಈಗ ವಾಹನ ದಟ್ಟನೆ ನಿವಾರಣೆ, ಅಪಘಾತ ಪ್ರಕರಣಗಳು ಇಲ್ಲದಂತಾಗುತ್ತದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜನರಿಗೆ ಯಾವುದೇ ಅಡ್ಡಿಯಿಲ್ಲದೆ ಸುರಕ್ಷಿತವಾಗಿ ಮತ್ತು ಸುಗಮವಾಗಿ ಸಂಚರಿಸಲು ಫ್ಲೈಓವರ್ ವರದಾನವಾಗಲಿದೆ ಎಂದರು.