ಐವರು ವಿದೇಶಿಗರು ಎನ್‌ಸಿಬಿ ಪೊಲೀಸ್ ವಶಕ್ಕೆ

NCB
NCB
Published on

ಪ್ರಮುಖ ಮುಖ್ಯಾಂಶಗಳು

  • ಬಂಧಿತರನ್ನು ಗಡಿಪಾರು ಮಾಡಲು ಎನ್‌ಸಿಬಿ ಕ್ರಮ
  • ಅಕ್ರಮವಾಗಿ ನೆಲೆಸುವ ಜತೆಗೆ ಡ್ರಗ್ಸ್ ದಂದೆ ನಡೆಸಿದ್ದರು
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಸಕ್ರಿಯರಾಗಿದ್ದಲ್ಲದೆ, ದಾಖಲೆಯಿಲ್ಲದೆ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿ ಪ್ರಜೆಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವೈಟ್‌ಫೀಲ್ಡ್ ಮತ್ತು ಪೂರ್ವ ವಿಭಾಗದ ಡಿಸಿಪಿ ಸಹಯೋಗದಲ್ಲಿ ಎನ್‌ಸಿಬಿ ಅಧಿಕಾರಿಗಳು ಕಮ್ಮನಹಳ್ಳಿ ಹಾಗೂ ಕೆ.ಆರ್.ಪುರದಲ್ಲಿ ಈಚೆಗೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ನಗರದಲ್ಲಿ ವಾಸವಿದ್ದ ವಿದೇಶಿಗರು ಸಿಕ್ಕಿಬಿದ್ದಿದ್ದಾರೆ.
ವಿಚಾರಣೆ ವೇಳೆ, ಬಂಧಿತರು ಯಾವುದೇ ಬ್ಯುಸಿನೆಸ್, ಕೆಲಸ ಅಥವಾ ಓದುವ ನೆಪವಿಲ್ಲದೆ ಕೇವಲ ಡ್ರಗ್ಸ್ ದಂಧೆಯಲ್ಲಿಯೇ ತೊಡಗಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಹಾಗಾಗಿ ಅಕ್ರಮ ವಾಸದ ಹಿನ್ನೆಲೆ ಇವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8 ವಿದೇಶಿ ಪ್ರಜೆಗಳ ಗಡಿಪಾರು: ನಗರದಲ್ಲಿ ಅಕ್ರಮವಾಗಿ ನೆಲೆಸುವ ಜತೆಗೆ ಡ್ರಗ್ಸ್ ಜಾಲದಲ್ಲಿ ತೊಡಗಿದ್ದ 7 ಆಫ್ರಿಕನ್ ಹಾಗೂ ಒಬ್ಬ ಯೆಮೆನ್ ಪ್ರಜೆ ಸೇರಿ ಒಟ್ಟು 8 ವಿದೇಶಿಗರನ್ನು ಈ ವರ್ಷ (2026) ಎನ್‌ಸಿಬಿ ಗಡಿಪಾರು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದೇಶಿ ಪ್ರಜೆಗಳ ಗುಂಪು ಅನುಮಾನಾಸ್ಪದವಾಗಿ ನೆಲೆಸಿರುವ ಬಗ್ಗೆ ಎನ್‌ಸಿಬಿ ಬೆಂಗಳೂರು ವಲಯ ಘಟಕ ಗಮನಿಸಿತ್ತು. ಆದ್ದರಿಂದ ಪೂರ್ವ ಮತ್ತು ವೈಟ್‌ಫೀಲ್ಡ್ ವಿಭಾಗದ ಡಿಸಿಪಿಗಳ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿದೇವು ಎಂದಿದ್ದಾರೆ.
ಡ್ರಗ್ಸ್ ದಂಧೆಕೋರರ ಬಗ್ಗೆ ಮಾಹಿತಿ ನೀಡಿ: ನಗರದಲ್ಲಿ ಡ್ರಗ್ಸ್ ಮಾರಾಟ ಅಥವಾ ಸಾಗಾಟದಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಯಾರಿಗೂ ಭಯಪಡದೆ ರಾಷ್ಟ್ರೀಯ ಸಹಾಯವಾಣಿ 1933ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮನೆ ಮಾಲೀಕರೇ ಎಚ್ಚರ..!

ನಗರದಲ್ಲಿರುವ ಮನೆ ಮಾಲೀಕರು ವಿದೇಶಿಗರಿಗೆ ಮನೆ ಬಾಡಿಗೆ ಕೊಡುವಾಗ ಕಡ್ಡಾಯವಾಗಿ 24 ಗಂಟೆಯೊಳಗೆ ‘ಾರ್ಮ್-ಸಿ’ ಭರ್ತಿ ಮಾಡುವ ಮೂಲಕ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇದನ್ನು ತಪ್ಪಿ ನಡೆದರೆ ಕಾನೂನು ಪ್ರಕಾರ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಿರಿ ಎಂದು ಎನ್‌ಸಿಬಿ ಎಚ್ಚರಿಕೆ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net