ಸ್ವಉದ್ಯೋಗ ಕಂಡುಕೊಂಡು ಪ್ರಗತಿ ಸಾಧಿಸಿ

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ನೇರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಡಾ.ಮಹದೇವಸ್ವಾಮಿ, ಮಂಜುನಾಥ್ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ನೇರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಡಾ.ಮಹದೇವಸ್ವಾಮಿ, ಮಂಜುನಾಥ್ ಇದ್ದರು.
Published on
ಗುಂಡ್ಲುಪೇಟೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತೆ ಬಹುಮುಖ್ಯವಾಗಿದ್ದು, ಇಂತಹ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಲಹೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಸಂಗಮ ಪ್ರತಿಷ್ಠಾನ ಹಾಲಹಳ್ಳಿ, ಸಂಕಲ್ಪ ಶಿಕ್ಷಕರ ವೇದಿಕೆ ಹಾಗೂ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ನೇರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಒಂದು ದಿನದ ಉಚಿತ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ನಿರುದ್ಯೋಗ ಸಮಸ್ಯೆ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಬದಲಾದ ಶಿಕ್ಷಣ ವ್ಯವಸ್ಥೆ ಹಾಗೂ ಸರ್ಕಾರಿ ನಿಯಮಗಳ ನಡುವೆ ಉದ್ಯೋಗ ದಕ್ಕಿಸಿಕೊಳ್ಳುವುದು ಯುವಜನತೆಗೆ ಹೆಚ್ಚು ಸವಾಲಿನ ಕೆಲಸವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವಲ್ಲಿಯೇ ಉದ್ಯೋಗ ಸಿಗಬೇಕು ಎನ್ನುವ ಮನೋಭಾವದಿಂದ ಯುವಕರು ಹೊರಬರಬೇಕು. ತಾವಿರುವ ವ್ಯಾಪ್ತಿಯಲ್ಲೇ ಕೆಲಸ ಹುಡುಕುವ ಧೋರಣೆ ಬಿಟ್ಟು ಸಿಕ್ಕಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರಗತಿ ಹೊಂದಬೇಕು. ಸರ್ಕಾರಿ ನೌಕರಿ ಬದಲು ಸ್ವಂತ ಉದ್ಯೋಗ ಮಾಡುವ ಮೂಲಕ ಉದ್ಯಮಶೀಲರಾಗಬೇಕು ಎಂದು ಸಲಹೆ ನೀಡಿದರು.

ಸಂಕಲ್ಪ ಶಿಕ್ಷಕರ ವೇದಿಕೆ ಹಾಗೂ ಮಹಾಮನೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಕಾರ್ಯ ಶ್ಲಾಘನೀಯವಾಗಿದ್ದು, ತಾಲೂಕಿನ ವಿದ್ಯಾರ್ಥಿ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ. ಹೀಗಾಗಿ ಮೂರು ಸಂಸ್ಥೆಗಳು ಒಟ್ಟಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಪಟ್ಟಣ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಸೂಕ್ತ ಸಿಎ ನಿವೇಶನವನ್ನು ಉಪವಿಭಾಗಾಧಿಕಾರಿಗಳ ಮೂಲಕ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಎನ್.ಮಹದೇವಸ್ವಾಮಿ, ಸಾಧನಾ ಅಕಾಡೆಮಿಯ ಮಂಜುನಾಥ್ ಸೇರಿದಂತೆ ಸಂಕಲ್ಪ ವೇದಿಕೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net