ಎಸ್ಐಆರ್ ಅಂತಿಮ ಪಟ್ಟಿ ಇಂದು ಪ್ರಕಟ; ಚುನಾವಣಾ ಆಯೋಗದ ನೋಟಿಸ್​ಗೆ ಸ್ಪಂದಿಸದ 61 ಸಾವಿರ ಮಂದಿ ಹೊರಕ್ಕೆ?

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಹಿಡಿದು ಅಂಗನವಾಡಿ ಕಾರ್ಯಕರ್ತೆಯರವರೆಗೆ ಸರ್ಕಾರದ ವಿವಿಧ ಹಂತದ ಆಡಳಿತ ಯಂತ್ರವೇ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು.
ಎಸ್ಐಆರ್ ಅಂತಿಮ ಪಟ್ಟಿ ಇಂದು ಪ್ರಕಟ; ಚುನಾವಣಾ ಆಯೋಗದ ನೋಟಿಸ್​ಗೆ ಸ್ಪಂದಿಸದ 61 ಸಾವಿರ ಮಂದಿ ಹೊರಕ್ಕೆ?
Published on: 

ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ತಿಂಗಳಿಂದ ನಡೆದ ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇಂದು(ಅ.27) ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು, ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಹಿಡಿದು ಅಂಗನವಾಡಿ ಕಾರ್ಯಕರ್ತೆಯರವರೆಗೆ ಸರ್ಕಾರದ ವಿವಿಧ ಹಂತದ ಆಡಳಿತ ಯಂತ್ರವೇ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಸುದೀರ್ಘ ಪರಿಷ್ಕರಣೆಯ ಕೊನೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು ಶೇ.45 ಅಂದರೆ ಸರಿಸುಮಾರು 47 ಲಕ್ಷ ಮತದಾರರ ಹೆಸರು ‘ಎಎಸ್ಡಿಡಿಒ’ (ಅನುಪಸ್ಥಿತಿ, ಸ್ಥಳಾಂತರ, ಮೃತ ಹಾಗೂ ಇತರರು) ವರ್ಗದಡಿ ಮತದಾರರ ಪಟ್ಟಿಯಿಂದ ಹೊರಗುಳಿಯಲಿವೆ.

61 ಸಾವಿರ ಹೆಸರು ಹೊರಕ್ಕೆ?

ಇನ್ನು ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಮ್ಯಾಪಿಂಗ್ ಮಾಡದ ಹಾಗೂ ಸೂಕ್ತ ತಾರ್ಕಿಕ ದೋಷ ಸರಿಪಡಿಸಿಕೊಳ್ಳಲು ನೋಟಿಸ್ ನೀಡಿದರೂ ಆಯೋಗಕ್ಕೆ ಸ್ಪಂದಿಸದ 61 ಸಾವಿರ ಹೆಸರು ಮತದಾರರ ಪಟ್ಟಿಯಿಂದ ಹೊರಗಳಿಯಲಿವೆ. 2026ರ ಜೂ.16ರ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಹೆಸರಿತ್ತು. ಈ ಹೆಸರಿಗೆ ಎನ್ಯುಮರೇಷನ್ ನಮೂನೆ ಮುದ್ರಿಸಿ ಮನೆಮನೆಗೆ ತಲುಪಿಸಲಾಗಿತ್ತು.

ಈ ವೇಳೆ, ನಿಧನ ಮತದಾರರ ಹೆಸರಿನಲ್ಲಿದ್ದ 16,39,864 ಅರ್ಜಿಯನ್ನು ಹಿಂಪಡೆಯಲಾಯಿತು. ಬೇರೆಡೆ ಹೆಸರು ನೊಂದಾಯಿಸಿಕೊಂಡವರು- 7,09,870, ಶಾಶ್ವತ ಸ್ಥಳಾಂತರಗೊಂಡವರು- 65,45,679, ಮತ್ತು ಗೈರಾದವರು ಮತ್ತು ಇತರ ಕಾರಣ (ತಿರಸ್ಕಾರ ಸೇರಿ)- 18,90,926 ಅರ್ಜಿಗಳನ್ನು ಹೊರಗಿಟ್ಟು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಕರಡು ಪಟ್ಟಿಗೆ 4,46,35,975 ಮಂದಿ ಸೇರಿದ್ದು, ಇವರಲ್ಲಿ ಮಾಹಿತಿ ವ್ಯತ್ಯಾಸದ ಕಾರಣಕ್ಕೆ 20,35,835 ಮಂದಿ ಮತ್ತು ಕರಡು ಪಟ್ಟಿಯಲ್ಲಿದ್ದೂ ಮ್ಯಾಪಿಂಗ್ ಆಗದ 23,45,500 ಮಂದಿಗೆ ನೋಟಿಸ್ ನೀಡಲಾಗಿತ್ತು. ಇನ್ನು 10 ಲಕ್ಷದಷ್ಟು ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.

ಹೆಸರಿರುವ ಬಗ್ಗೆ ಖಾತ್ರಿ ಹೇಗೆ?

1. ಅಂತಿಮ ಮತದಾರರ ಪಟ್ಟಿ ಮಂಗಳವಾರ ಅಧಿಕೃತವಾಗಿ ಪ್ರಕಟವಾಗಲಿದೆ. ಬಳಿಕ ಆಯೋಗದ ವೆಬ್ಸೈಟ್, ಮೊಬೈಲ್ ಅಪ್ಲಿಕೇಷನ್ನಲ್ಲಿ ವೀಕ್ಷಿಸಬಹುದು.

2. https://electoralsearch.eci.gov.in/ ಅಥವಾ ಇಸಿಐನೆಟ್ ಮೊಬೈಲ್ ಅಪ್ಲಿಕೇಷನ್ನಲ್ಲಿ ಪರಿಶೀಲಿಸಬಹುದು.

3. ಕರಡು ಮತದಾರರ ಪಟ್ಟಿ ವೀಕ್ಷಣೆ ಮಾಡಿದಂತೆಯೆ ಎಪಿಕ್ ಕಾರ್ಡ್ ನಂಬರ್ ಬಳಸಬಹುದು ಅಥವಾ ತಮ್ಮ ಬೂತ್ನ ಮಾಹಿತಿಯ ಪಿಡಿಎಫ್ ಡೌನ್ಲೋಡ್ ಮಾಡಿ ನೋಡಬಹುದು.

4. ಆಯೋಗವು ಜಿಲ್ಲೆ ಹಾಗೂ ತಾಲೂಕು ಚುನಾವಣಾಧಿಕಾರಿ ಮತ್ತು ಪಕ್ಷಗಳಿಗೆ ಮುದ್ರಿತ ಪ್ರತಿಯನ್ನು ನೀಡಲಿದೆ.

5. ಪಟ್ಟಿಯ ಮುದ್ರಿತ ಪ್ರತಿಯನ್ನು ಖರೀದಿಸಬಹುದು. ಈ ಬಗ್ಗೆ ಚುನಾವಣಾ ಅಧಿಕಾರಿಯನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net