ಬಸವನಪುರ ಗ್ರಾಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ರೈತರಿಗೆ ರಾಗಿ ಮತ್ತು ಕೃಷಿ ಪರಿಕರ ವಿತರಿಸಿದರು. ದಿನೇಶ್, ದೊರೆಸ್ವಾಮಿ, ಪುಟ್ಟಸ್ವಾಮಿ, ಸ್ವಾಮಿ, ಸುರೇಶ್, ವಿಜಯಕುಮಾರ್, ಪ್ರಕಾಶ್ ಇದ್ದರು.
ಹವಾಮಾನ ಬದಲಾವಣೆಯಿಂದಾಗಿ ರೈತರು ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದ್ದು, ಇದನ್ನು ತಪ್ಪಿಸಲು ಬೆಳೆ ವಿಮೆ ಮಾಡಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮನವಿ ಮಾಡಿದರು.
ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ವತಿಯಿಂದ ಹೋಬಳಿಯ ಬಸವನಪುರ ಗ್ರಾಮದಲ್ಲಿ ಎಫ್‌ಎನ್‌ಎಸ್ ಯೋಜನೆಯಡಿ ಗ್ರಾಮದ ಫಲಾನುಭವಿ ರೈತರಿಗೆ ರಾಗಿ ಮತ್ತು ಇತರ ಪರಿಕರ ವಿತರಿಸಿ ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕಿನಲ್ಲಿ ಈಗಾಗಲೇ ಅಲಸಂದೆ, ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ಸುಮಾರು 23 ಸಾವಿರ ರೈತರು ವಿಮೆಗೆ ನೋಂದಾಯಿ ಸಿಕೊಂಡಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಆದೇಶದ ಅನ್ವಯ ವಿಮಾ ಕಂಪನಿಗಳು ವಿವಿಧ ಬೆಳಗಳಿಗೆ ಪರಿಹಾರ ನೀಡಲಿದೆ. ಕಳೆದ ವರ್ಷವೂ ತಾಲೂಕಿನ ರೈತರಿಗೆ ಸುಮಾರು 23 ಲಕ್ಷ ರೂ. ಪರಿಹಾರ ಸಿಕ್ಕಿತ್ತು ಎಂದರು.
ಎಫ್‌ಎನ್‌ಎಸ್ ಯೋಜನೆಯಡಿ 2026- 27ನೇ ಸಾಲಿನಲ್ಲಿ ಬಸವನಪುರ ಗ್ರಾಮದ 150 ಫಲಾನುಭವಿ ರೈತರಿಗೆ 5 ಕೆಜಿ ರಾಗಿ, 50 ಕೆಜಿ ಜಿಪ್ಸಂ, 50 ಕೆಜಿ ಪ್ರೋಮ್, 1 ಲೀಟರ್ ಬೇವಿನ ಎಣ್ಣೆ ನೀಡಲಾಗುತ್ತಿದೆ. ಈ ಎಲ್ಲ ಕೃಷಿ ಪರಿಕರಗಳಿಗೆ 1,485 ರೂ. ವೆಚ್ಚವಾಗ ಲಿದೆ. ರಾಗಿ ಬೆಳೆವಿಮೆ ಮಾಡಿಸಲು ಆ.14 ಕೊನೆಯ ದಿನವಾಗಿದ್ದು, ಈ ಬಗ್ಗೆ ರೈತರು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರದಿಂದ ಇತ್ತೀಚಿನ ವರ್ಷಗಳಲ್ಲಿ ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ದೊರಕುತ್ತಿಲ್ಲ. ಇದರಿಂದ ಬಿತ್ತನೆ ಬೀಜ, ಯಂತ್ರೋಪಕರಣ ಸೇರಿದಂತೆ ವಿವಿಧ ಯೋಜನೆಗಳಿಗೆ ಹಿನ್ನಡೆಯಾಗಿದೆ. ರೈತರ ಬೆನ್ನೆಲುಬಾಗಿರುವ ಕೃಷಿ ಇಲಾಖೆ ಕೃಷಿ ಇಲಾಖೆಗೆ ಜೀವ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ಆಗ ಮಾತ್ರ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಲು ಸಾಧ್ಯ ಎಂದರು.
ಹೋಬಳಿ ವ್ಯಾಪ್ತಿಯ ರೈತರಿಗೆ ಸ್ಪ್ರಿಂಕ್ಲರ್ ಸೆಟ್ ಸೇರಿದಂತೆ ಅನೇಕ ಸವಲತ್ತುಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಇಲಾಖೆಯಿಂದ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡಲಿದ್ದಾರೆ ಎಂದರು.
ಗ್ರಾಮದಲ್ಲಿ ಕಳೆದ ಅನೇಕ ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಗ್ರಾಮಸ್ಥರು ಶಾಸಕರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಶಾಸಕರು, ಪ್ರತಿದಿನ 4 ಟ್ಯಾಂಕರ್‌ನೊಂದಿಗೆ 2 ದಿನಗಳಿಗೊಮ್ಮೆ ಖಾಸಗಿ ಕೊಳವೆ ಬಾವಿಯಿಂದ ನೀರಿನ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ಕೃಷಿ ಅಧಿಕಾರಿ ಜಿ.ವಿ.ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ವಿ.ಎನ್.ಮಂಜುನಾಥ್, ದೊರೆಸ್ವಾಮಿ, ಅಕ್ಕನಹಳ್ಳಿ ಕೂಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಿಶೋರ್, ಮುಖಂಡರಾದ ಪುಟ್ಟಸ್ವಾಮಿ, ವಿಕ್ಟರ್, ಹುಲಿಕೆರೆ ಸಂಪತ್ ಕುಮಾರ್, ಮಧು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಪ್ರಕಾಶ್, ಯುವ ಮುಖಂಡ ಸ್ವಾಮಿ, ಡೈರಿ ಸುರೇಶ್, ನಂಜಮರಿಗೌಡ, ಮಂಜೇಗೌಡ, ಸದಾಶಿವ ಇತರರಿದ್ದರು.