ಬೆಳೆಗಾರರ ಫಸಲು ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು
ಸೋಮವಾರಪೇಟೆ: ಹವಾಮಾನ ವೈಪ್ಯರೀತ್ಯ, ಅಕಾಲಿಕ ಮಳೆ, ಮುಂಗಾರು ವಿಳಂಬ ಸೇರಿದಂತೆ ಇತರ ಕಾರಣಗಳಿಂದ ಕಾಫಿ ಫಸಲು ಹಾನಿಯಾಗಿ ಬೆಳೆಗಾರರು ಸಾಲಗಾರರಾಗಿ ಸಂಕಷ್ಟದಲ್ಲಿದ್ದು, ಬೆಳೆಗಾರರ ಫಸಲು ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಒತ್ತಾಯಿಸಿದೆ.
ಕಾಫಿ ಉದ್ದಿಮೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಿವಿಧ ಮೂಲಗಳಿಂದ 28 ಸಾವಿರ ಕೋಟಿ ರೂ. ಆದಾಯ ಹೋಗುತ್ತಿದೆ. ಆದರೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸದೆ ಅನ್ಯಾಯ ಮಾಡುತ್ತಿವೆ ಎಂದು ಸಂಘದ ಅಧ್ಯಕ್ಷ ಬಿ.ಎಂ.ಲವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೊಡಗಿನಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಫಸಲು ಶೇ.60 ರಷ್ಟು ಹಾನಿಯಾಗಿದೆ. ಅತಿಯಾದ ಬಿಸಿಲಿನಿಂದ ಅರೇಬಿಕ ಕಾಫಿ ತೋಟಗಳಲ್ಲಿ ಬಿಳಿಕಾಂಡಕೊರಕ ಕೀಟಬಾಧೆಯಿಂದ ಫಸಲು ನೀಡುವ ಗಿಡಗಳು ಸಾಯುತ್ತಿವೆ. ಬಹುತೇಕ ಕಾಫಿ ತೋಟಗಳು ರೋಗಪೀ ಡಿತವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಬೆಳೆಗಾರರಿಗೆ ಕಾಫಿ ತೋಟ ನಿರ್ವಹಣೆ ಸಾಧ್ಯವಾಗದೆ ಪಾಳುಬಿಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಫಿ ತೋಟದ ನಿರ್ವಹಣೆಗಾಗಿ ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್‌ನಲ್ಲಿ ಸಾಲ ಮಾಡಲಾಗಿದೆ. ಬೆಳೆಗಾರರಿಗೆ ಬಡ್ಡಿ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇವೆಲ್ಲಾ ಕಾರಣಗಳಿಂದ ಸಾಲ ಮನ್ನಾ ಮಾಡಬೇಕು ಎಂದು ಹೇಳಿದರು.
ಸರ್ಕಾರ ಬೆಳೆಗಾರರಿಗೆ ಸೌಲಭ್ಯ ಒದಗಿಸದಿದ್ದರೆ, ಕಾಫಿ ಉತ್ಪಾದನೆ ಗಣನೀಯವಾಗಿ ಕುಸಿತಗೊಂಡು, ಸರ್ಕಾರಗಳಿಗೆ ಆದಾಯಕ್ಕೂ ಹೊಡೆತಬೀಳಲಿದೆ. ಸಂಸದರು ಹಾಗೂ ಮಲೆನಾಡು ಭಾಗದ ಶಾಸಕರು ಕಾಫಿ ಉದ್ದಿಮೆ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಸಾಲಮನ್ನಾ ಮಾಡುವುದಕ್ಕೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಸರ್ಫೆಸಿ ಕಾಯ್ದೆ ಕಾಫಿ ಬೆಳೆಗಾರರಿಗೆ ಮರಣ ಶಾಸನವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಕಾಯ್ದೆಯನ್ನು ರದ್ದುಪಡಿಸಬೇಕು. ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಕಾಯ್ದೆ ಪ್ರಕಾರ ಬ್ಯಾಂಕ್‌ಗಳಿಗೆ ಸಾಲ ಪಡೆಯಲು ಅಡವಿಟ್ಟ ಭೂಮಿಯನ್ನು ವಾಯಿದೆ ಮುಗಿದ ನಂತರ ಮಾಲಿಕರ ಗಮನಕ್ಕೆ ತರದೆ ಸಿಕ್ಕ ಬೆಲೆಗೆ ಹರಾಜು ಮಾಡುವ ಪರಮಾಧಿಕಾರವನ್ನು ಬ್ಯಾಂಕ್‌ಗಳಿಗೆ ನೀಡಲಾಗಿದೆ. ಭಾಗಮಂಡಲ ದಲ್ಲಿ 35 ಎಕರೆ ಕಾಫಿ ತೋಟವನ್ನು 90 ಲಕ್ಷಕ್ಕೆ ಹರಾಜು ಮಾಡಲಾಗಿದೆ. ಕೊಡಗಿನಲ್ಲಿ ಒಂದು ಎಕರೆ ಕಾಫಿ ತೋಟಕ್ಕೆ 15ರಿಂದ 30 ಲಕ್ಷ ರೂ.ಗಳ ಬೆಲೆಯಿದೆ. ಇಂತಹ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಹಾಲು ಕೊಡುವ ಹಸುವಿನ ಕೆಚ್ಚಲನ್ನು ಸರ್ಕಾರಗಳು ಕತ್ತರಿಸುವ ಕೃತ್ಯ ಮಾಡಬಾರದು ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾಫಿ ಬ್ಲಾಸಂ ಸಂದರ್ಭ ನಿಗದಿತ ಪ್ರಮಾಣದಲ್ಲಿ ಹೂಮಳೆ ಬೀಳಲಿಲ್ಲ. ಜೂನ್ ತಿಂಗಳಲ್ಲಿ ವಿಪರೀತ ಬಿಸಿಲು ಕಾಣಿಸಿಕೊಂಡಿದ್ದರಿಂದ ಮುಂಗಾರು ವಿಳಂಬವಾಯಿತು. ಈಗ ಗಿಡಗಳು ರೋಗಪೀಡಿತವಾಗಿವೆ. ಕೀಟನಾಶಕ, ಶಿಲಿಂದ್ರನಾಶಕ, ರಾಸಯನಿಕ ಗೊಬ್ಬರ ಬೆಲೆ ಗಗನಕ್ಕೇರಿದೆ. ನಿಗದಿತ ಸಮಯದಲ್ಲಿ ಗೊಬ್ಬರ ಸಿಗುತ್ತಿಲ್ಲ. ಕಳೆದ ವರ್ಷ ಅಕಾಲಿಕ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಳುಮೆಣಸು ಬಳ್ಳಿಗಳು ನಾಶವಾಗಿವೆ. ಕೂಲಿ ಕಾರ್ಮಿಕರ ಸಂಬಳ ಹೆಚ್ಚಾಗಿದೆ. ಕಾಫಿ ಬೆಳೆಗಾರರು ಜೀವನ ಹೇಗೆ ಸಾಗಿಸಬೇಕು. ಸರ್ಕಾರಗಳು ತುರ್ತಾಗಿ ಬೆಳೆಗಾರರಿಗೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಎಚ್.ಕೆ.ಪ್ರಸಿ, ಕಾರ್ಯದರ್ಶಿ ಮನೋಹರ್, ನಿರ್ದೇಶಕರಾದ ಅನಂತರಾಮ್, ಕೆ.ಜಿ.ಎಫ್. ನಿರ್ದೇಶಕ ಸಿ.ಕೆ.ಮಲ್ಲಪ್ಪ ಸುದ್ದಿಗೋಷ್ಠಿಯಲ್ಲಿದ್ದರು.