ಕಾಂಗ್ರೆಸ್‌ಗೆ ಅಧಿಕಾರ ಇಲ್ಲದಿರುವಾಗ ರೈತರ ನೆನಪು

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಅಪ್ಪುಗೌಡ ಪಾಟೀಲ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಕೃಷ್ಣಾ ರಡ್ಡಿ, ಸಿ.ಬಿ. ಸುರೇಶ ಬಾಬು, ಚಂದ್ರಶೇಖರ, ರಾಜು ಗೌಡ ಪಾಟೀಲ ಇತರರಿದ್ದರು.
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಅಪ್ಪುಗೌಡ ಪಾಟೀಲ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಕೃಷ್ಣಾ ರಡ್ಡಿ, ಸಿ.ಬಿ. ಸುರೇಶ ಬಾಬು, ಚಂದ್ರಶೇಖರ, ರಾಜು ಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಖಿಲ್ ಕುಮಾರಸ್ವಾಮಿ ಹೇಳಿಕೆ
  • ಶ್ವೇತ ಪತ್ರ ಹೊರಡಿಸಲಿ
ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇಲ್ಲದಾಗ ರೈತರು ಮತ್ತು ನೀರಾವರಿ ಯೋಜನೆಗಳ ನೆನಪಾಗಿ ಪಾದಯಾತ್ರೆ ಮಾಡುತ್ತಾರೆ. ರಾಜ್ಯದ ರೈತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ನಿರಂತರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಅಪ್ಪುಗೌಡ ಪಾಟೀಲ ಅವರು ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 1 ಲಕ್ಷ ಕೋಟಿ ರೂ. ಹಣ ಮೀಸಲಿಟ್ಟು ನೀರಾವರಿ ಯೋಜನೆ ಕೈಗೊಳ್ಳುವ ಭರವಸೆ ನೀಡಿದ್ದು ಈ ಮೂರು ವರ್ಷದಲ್ಲಿ ಯಾವ ನೀರಾವರಿ ಯೋಜನೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆಂದು ಶ್ವೇತ ಪತ್ರ ಹೊರಡಿಸಲಿ ಎಂದು ಹೇಳಿದರು.
ಹಳೇ ಮೈಸೂರು, ಮಧ್ಯ ಕರ್ನಾಟಕದ, ಕರಾವಳಿ, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಈ ಬಾರಿ ಅನಾವೃಷ್ಟಿ ಉಂಟಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ನಡೆಯಬೇಕಿದ್ದ ಸಜ್ಜೆ, ಮೆಕ್ಕೆಜೋಳ ಮತ್ತು ಹತ್ತಿ ಬಿತ್ತನೆ ಕಾರ್ಯ ಮಳೆ ಅಭಾವದಿಂದ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿದೆ.
ವಾಡಿಕೆಯಂತೆ 116 ಮಿ.ಮೀ. ಮಳೆ ಬೀಳಬೇಕಿದ್ದ ಜಾಗದಲ್ಲಿ ಬಹಳ ಕಡಿಮೆ ಮಳೆಯಾಗಿದ್ದು, 5.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಕೇವಲ 1.5 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದ್ದ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರೈತರ ಸಂಕಷ್ಟವನ್ನು ಲಘುವಾಗಿ ಪರಿಗಣಿಸುತ್ತಿದೆ 135 ತಾಲೂಕುಗಳು ಬರಪೀಡಿತ ಎಂದು ವರದಿಯಿದ್ದರೂ ಸರ್ಕಾರ ಅದನ್ನು ಮುಚ್ಚಿಟ್ಟಿದೆ ಎಂದರು. ಮುಖ್ಯಮಂತ್ರಿಗಳು ‘ಯಾರೂ ಬಿತ್ತನೆ ಮಾಡಬೇಡಿ’ ಎಂದು ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು, ಸರ್ಕಾರ ಕನಿಷ್ಠ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡ ಸ್ಥಳಕ್ಕೆ ಕಳುಹಿಸಿಲ್ಲ ಎಂದು ಆರೋಪಿಸಿದರು.
ಬರ ಅಧ್ಯಯನ ತಂಡದ ಪ್ರವಾಸವನ್ನು ಪೂರ್ಣಗೊಳಿಸಿ, ನೈಜ ವರದಿಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತರುವುದಲ್ಲದೆ, ರಾಜ್ಯಪಾಲರ ಮೂಲಕ ಸರ್ಕಾರವನ್ನು ಎಚ್ಚರಿಸುವುದಾಗಿ ಹೇಳಿದರು.
ಅಧಿವೇಶನದಲ್ಲಿ ಪ್ರತಿ ಎಕರೆಗೆ ಕನಿಷ್ಠ 25,000 ರೂ. ಬರ ಪರಿಹಾರ ನೀಡುವಂತೆ ಹಾಗೂ ಭೂಮಿ ಪಾಲು ಪಡೆದ ರೈತರಿಗೂ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು 50,000ರೂ.ವರೆಗೆ ಪರಿಹಾರ ನೀಡುವಂತೆ ಜೆಡಿಎಸ್ ಒತ್ತಾಯಿಸಲಿದೆ. ಕುಡಿಯುವ ನೀರಿನ ಅಭಾವವಿರುವ ಪ್ರತಿ ತಾಲೂಕಿಗೆ ತಲಾ 5 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಮತ್ತು ರೈತರ ಸಾಲ ವಸೂಲಿ ಹಾಗೂ ಆಸ್ತಿ ಜಪ್ತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಮೇವಿನ ಕೊರತೆ ನೀಗಿಸಲು ಗೋಶಾಲೆ ಮತ್ತು ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು ಎಂದು ಅವರು ಸಲಹೆ ನೀಡಿದರು.
2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ ಮಾತಿನಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದರು, ಆದರೆ ಪ್ರಸ್ತುತ ಸರ್ಕಾರ ಅಂತಹ ಬದ್ಧತೆ ತೋರುತ್ತಿಲ್ಲ ಎಂದು ಟೀಕಿಸಿದರು.
ಮುಂಬರುವ ದಿನಗಳಲ್ಲಿ ‘ರೈತ ಅದಾಲತ್’ ನಡೆಸುವುದಾಗಿ ತಿಳಿಸಿದ ಅವರು, ಬಿಡದಿ ವಿಚಾರ ಮತ್ತು ಪಕ್ಷದ ಟಿಕೆಟ್ ಹಂಚಿಕೆ ಕುರಿತಂತೆ ಸರ್ವೇ ವರದಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಬರ ಅಧ್ಯಯನ ಪ್ರವಾಸ ಮುಗಿದ ಬಳಿಕ ಈ ತಿಂಗಳ ಅಂತ್ಯದೊಳಗೆ ರಾಜ್ಯಪಾಲರಿಗೆ ವರದಿ ಸಲ್ಲಿಸುವುದಾಗಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕೃಷ್ಣಾ ರಡ್ಡಿ, ಸಿ.ಬಿ. ಸುರೇಶ ಬಾಬು, ಚಂದ್ರಶೇಖರ, ರಾಜು ಗೌಡ ಪಾಟೀಲ, ಬಾಬು ಬೆಲ್ಲದ, ಮಲ್ಲಿಕಾರ್ಜುನ ಯಂಡಿಗೇರಿ, ಜಗದೀಶ ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ಅವಟಿ, ಬಸವರಾಜ ಅವಟಿ, ರವಿ ಪಟ್ಟಣಶೆಟ್ಟಿ, ಅಪ್ಸರಾಬೆಂಗ ಚಪ್ಪರಬಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net