ರೈತರಿಂದ ಸಂಭ್ರಮದ ಎಳ್ಳ ಅಮಾವಾಸ್ಯೆ ಆಚರಣೆ

ಎಳ್ಳ ಅಮಾವಾಸ್ಯೆಯನ್ನು ಶುಕ್ರವಾರ ಆಚರಣೆ
ಎಳ್ಳ ಅಮಾವಾಸ್ಯೆಯನ್ನು ಶುಕ್ರವಾರ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಬನ್ನಿ ಮರಕ್ಕೆ ಸೀರೆ ತೊಡಿಸಿ, ಉಡಿ ತುಂಬಿ,
  • ರೈತರು ಎಳ್ಳ ಅಮವಾಸ್ಯೆ
  • ‘ಹುಲ್ಲಿಗೂ_ ಸುರಾಂಬ್ಲಿಗೋ ’
ರಾಯಚೂರು
ರೈತರು ಭೂಮಿ ತಾಯಿ ಯಾವುದೇ ಕಾರಣಕ್ಕೆ ನಮ್ಮನ್ನು ಕೈಬಿಡುವುದಿಲ್ಲವೆಂದು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ
ರೈತರು ಸಂಭ್ರಮದಿಂದ ಎಳ್ಳ ಅಮಾವಾಸ್ಯೆಯನ್ನು ಶುಕ್ರವಾರ ಆಚರಣೆ ಮಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಸಂತಸದಲ್ಲಿದ್ದು, ವಿವಿಧೆಡೆ ರೈತರು ಬೆಳಗ್ಗೆಯಿಂದಲೇ ಹಬ್ಬದ ಸಂಭ್ರಮದಲ್ಲಿದ್ದರು. ಹಬ್ಬದ ನಿಮಿತ್ತ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು, ಎತ್ತಿನ ಗಾಡಿಯಲ್ಲಿ ಕುಳಿತು ಜಮೀನಿಗೆ ತೆರಳಿದರು.
ಹೊಲಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ಚೆರಗ ಚೆಲ್ಲಿ ಭೂತಾಯ ಕಪೆಗೆ ಪಾತ್ರರಾದರು.
ಅಗಸ್ಟ್‌ನಲ್ಲಿ ಸುರಿದ ಮಳೆಗೆ ಅತಿವಷ್ಠಿಗೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರಯಾಸಪಡುತ್ತಿರುವ ರೈತರು ಎಳ್ಳ ಅಮವಾಸ್ಯೆ ಅಂಗವಾಗಿ ಭೂತಾಯಿಗೆ ನೈವೈದ್ಯ ಸಮರ್ಪಿಸುವ ಮೂಲಕ ಮುಂದಿನ ಬೆಳೆಯನ್ನಾದರೂ ದಕ್ಕಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು.
ಕೆಲವರು ಬನ್ನಿ ಮರಕ್ಕೆ ಸೀರೆ ತೊಡಿಸಿ, ಉಡಿ ತುಂಬಿ, ಕೈಗೆ ಕಂಕಣಕಟ್ಟಿ ಹಾಗೂ ಪಂಚಪಾಂಡವರ ಸ್ವರೂಪವಾಗಿ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆಗೆ ಅರ್ಪಿಸಿದ ನೈವೈದ್ಯವನ್ನು ಜಮೀನಿನೆಲ್ಲೆಡೆ ಸುತ್ತಾಡಿ ಚರಗ ಚೆಲ್ಲಿದರು.‘‘ಹುಲ್ಲಿಗೂ_ ಸುರಾಂಬ್ಲಿಗೋ ’’ ಎಂದು ಸಿಹಿ ತಿನಸುಗಳನ್ನು ಹೊಲದ ಸುತ್ತ ಚೆಲ್ಲಿ, ಉತ್ತಮ ಫಸಲು ಬರಬೇಕೆಂದು ಪ್ರಾರ್ಥನೆ ಸಲ್ಲಿಸಿದರು.
ನಂತರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗೆಳೆಯರೊಡನೆ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಪುಂಡಿಪಲ್ಯಾ, ಬದನೆಕಾಯಿ ಪಲ್ಯಾ, ಖಡಕ್ ರೊಟ್ಟಿ, ವಿವಿಧ ಬಗೆಯ ಪಲ್ಲೆಗಳು,ಶೇಂಗಾ, ಗುರೆಳ್ಳು, ಪುಠಾಣಿ ಚಟ್ನಿ, ಕಡಬು, ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಕರಿಗಡಬು, ಬಜ್ಜಿ ಹಬ್ಬದೂಟ ಸವಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net