ಪುಲಿಕೇಶಿನಗರದಲ್ಲಿ ಸ್ಫೋಟ ಎನ್‌ಐಎ ತಂಡ ಪರಿಶೀಲನೆ

ಟೈಮರ್, ಬ್ಯಾಟರಿ, ವೈರ್‌ಗಳ ಎ್ಎಸ್‌ಎಲ್‌ಗೆ, ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಶಂಕೆ
IED Balast
IED Balast
Published on: 

ಬೆಂಗಳೂರು: ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಐಇಡಿ (ಕಚ್ಚಾ ಬಾಂಬ್) ಸ್ಫೋಟ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತನಿಖೆ ನಡೆಸಲು ಮುಂದಾಗಿದೆ.

ಸ್ಫೋಟದ ಕುರಿತು ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು ಇದೊಂದು ವಿಧ್ವಂಸಕ ಕೃತ್ಯವಾಗಿದೆ. ನಿಷೇಧಿತ ಸಂಘಟನೆಗಳ ಸ್ಲೀಪರ್ ಸೆಲ್‌ಗಳು ಇದರ ಹಿಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅ.20ರಂದು ಮಧ್ಯಾಹ್ನ ಪುಲಿಕೇಶಿನಗರದ 5ನೇ ಮಹಡಿಯಲ್ಲಿ ಬ್ಯಾಟರಿ ಆಧಾರಿತ ವಸ್ತುವೊಂದು ಸ್ಪೋಟಗೊಂಡಿತ್ತು. ದುರ್ಘಟನೆಯಲ್ಲಿ ಕಟ್ಟಡದ ಕಾವಲುಗಾರನಾಗಿದ್ದ ಅಲ್ಲಾವುದ್ದೀನ್, ಪೆಂಟರ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಸೂರಜ್ ಕುಮಾರ್ ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳ ಹೇಳಿಕೆ ಆಧರಿಸಿ ಪುಲಿಕೇಶಿನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ವೈರ್, ಟೈಮರ್ ಹಾಗೂ ಬ್ಯಾಟರಿಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಸ್ಫೋಟಗೊಂಡಿರುವ ವಸ್ತುಗಳ ಮಾದರಿ ತೀವ್ರ ಸ್ವರೂಪದ್ದಾಗಿವೆ ಎನ್ನಲಾಗಿದೆ.

ಎನ್‌ಐಎ ಪರಿಶೀಲನೆ:

ಸ್ಫೋಟದ ಸಂಬಂಧ ಎನ್‌ಎಐ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಂದ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು, ಇದು ಆಕಸ್ಮಿಕ ಸ್ಫೋಟವಲ್ಲ. ಪೂರ್ವ ನಿಯೋಜಿತ ಸಂಚಾಗಿರಬಹುದು ಅಥವಾ ಬೇರೆ ಕಡೆ ಸ್ಫೋಟಿಸಲು ಸಂಚು ರೂಪಿಸಲಾಗಿತ್ತ ಎಂಬ ಅನುಮಾನ ವ್ಯಕ್ತಪಡಿಸಿರುವ ಎನ್‌ಐಎ ಅಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಕಾಲ ಕಟ್ಟಡ ಪರಿಶೀಲನೆ ನಡೆಸಿದ್ದಾರೆ.

ಕಟ್ಟಡದಲ್ಲಿರುವ ಸಿಬ್ಬಂದಿ ಹೇಳಿಕೆ ಪಡೆಯಲಾಗಿದೆ. ಕಾವಲುಗಾರನಾಗಿದ್ದ ಅಲ್ಲಾವುದ್ದೀನ್ ಮತ್ತು ಪೆಂಟರ್ ಸೂರಜ್ ಕುಮಾರ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇಬ್ಬರು ಸಹ ಗೊಂದಲದ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಎರಡು ವಾರಗಳಿಂದ ಅಸ್ಸಾಂ ಮೂಲದ ಅಲ್ಲಾವುದ್ದೀನ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರೆ, ಕೃತ್ಯಕ್ಕೂ ಮುನ್ನ ಎರಡು ದಿನಗಳಿಂದ ಉತ್ತರ ಪ್ರದೇಶ ಮೂಲದ ಸೂರಜ್, ಸಹೋದರ ಅಭಿಕುಮಾರ್ ಪೇಟಿಂಗ್ ಕೆಲಸದಲ್ಲಿ ತೋಡಗಿದ್ದರು. ಇಬ್ಬರು ಸಹೋದರರು ಬಾಬುಸಾಪಾಳ್ಯದಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡ ಯಾರಿಗೆ ಸೇರಿದ್ದು?

ರಾಮಮೂರ್ತಿನಗರದ ಉದ್ಯಮಿಯೊಬ್ಬರು ಪುಲಿಕೇಶಿನಗರದಲ್ಲಿ ಏಳು ಅಂತಸ್ತಿನ ಕಟ್ಟಡದ ಮಾಲೀಕರಾಗಿದ್ದಾರೆ. ಮೊದಲ ಎರಡು ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳಿವೆ. ಇನ್ನೂಳಿದ ಮಹಡಿಗಳಲ್ಲಿ ವಾಸದ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅ.20ರಂದು ಮಧ್ಯಾಹ್ನ 1.30ರ ಸುಮಾರಿಗೆ ಕಾರ್ಯನಿರತರಾಗಿದ್ದ ಅಲ್ಲಾವುದ್ದೀನ್‌ಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದ್ದ. ಬ್ಯಾಟರಿ ಮಾದರಿ ಪಾರ್ಸೆಲ್ ಸ್ವೀಕರಿಸಿದ ಕಾವಲುಗಾರ ಅಲ್ಲಾವುದ್ದೀನ್, 7ನೇ ಮಹಡಿಯಲ್ಲಿದ್ದ ಸೂರಜ್ ನನ್ನು 5ನೇ ಮಹಡಿಗೆ ಕರೆಯಿಸಿಕೊಂಡು ಪಾರ್ಸೆಲ್ ತೆರೆಯುವಂತೆ ಸೂಚಿಸಿದ್ದರು.

ಪಾರ್ಸೆಲ್ ತೆರೆದು ಬ್ಯಾಟರಿ ಹಾಗೂ ಸ್ವಿಚ್ ನೋಡುತ್ತಿದ್ದಂತೆ ಕೈಲ್ಲಿದ್ದ ವಸ್ತು ಸ್ಫೋಟಗೊಂಡಿದೆ. ಘಟನೆಯಲ್ಲಿ ಸೂರಜ್ ಬಾಯಿಗೆ ಮತ್ತು ಕೈಗೆ ಗಾಯಗೊಂಡರೆ ಅಲ್ಲಾವುದ್ದೀನ್ ಕೈ ಸೇರಿ ದೇಹದ ಇತರೆ ಭಾಗಗಳಿಗೆ ಸುಟ್ಟಗಾಯವಾಗಿತ್ತು. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಟೈಮರ್‌ನಿಂದ ಸ್ಫೋಟ ಶಂಕೆ!

ಸ್ಫೋಟದ ಸ್ಥಳದಲ್ಲಿ ದೊರಕಿದ್ದ ಟೈಮರ್, ವೈರ್ ಹಾಗೂ ಬ್ಯಾಟರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಎಫ್‌ಎಸ್‌ಎಲ್ಗೆ ಕಳುಹಿಸಿದ್ದಾರೆ. ಸೆಕ್ಯೂರಿಟಿಗಾರ್ಡ್ ಪಾರ್ಸೆಲ್ ತೆಗೆದುಕೊಂಡು ಹೇಳಿರುವ ವ್ಯಕ್ತಿ ಕೆಲ ನಿಮಿಷದ ನಂತರ ಟೈಮರ್‌ನಿಂದ ಸ್ಫೋಟಗೊಳಿಸಿರುವ ಶಂಕೆ ಇದೆ. ನಗರದ ವೈಟ್‌ಫೀಲ್ಡ್ ಬಳಿಯ ರಾಮೇಶ್ವರಂ ಕೆೆಯಲ್ಲೂ ಉಗ್ರನೊಬ್ಬ ಐಇಡಿ ಇರಿಸಿ, ಸ್ವಲ್ಪ ದೂರಕ್ಕೆ ಹೋಗಿ ಟೈಮರ್‌ನಿಂದ ಸ್ಫೋಟಗೊಳಿಸಿದ್ದ. ಅದೇ ಮಾದರಿಯಲ್ಲಿ ಬ್ಯಾಟರಿ ಆಧಾರಿತ ವಸ್ತುವನ್ನು ಟೈಮರ್‌ನಿಂದ ಸ್ಫೋಟಗೊಳಿಸಿರುವ ಬಗ್ಗೆ ಎನ್‌ಐಎ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net