ಅವಧಿ ಮೀರಿದ 78.24 ಕೋಟಿ ಮೌಲ್ಯದ ಜೀವರಕ್ಷಕ ಔಷಧ ನಾಶ- Expired life-saving medicine

78.24  ಕೋಟಿ ರೂ.ಮೌಲ್ಯದ ಜೀವರಕ್ಷಕ ಔಷಧಗಳು ನಾಶ
78.24 ಕೋಟಿ ರೂ.ಮೌಲ್ಯದ ಜೀವರಕ್ಷಕ ಔಷಧಗಳು ನಾಶ
Published on

ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ಔಷಧಗಳ ಅಭಾವ ಕಾಡುತ್ತಿರುವ ನಡುವೆಯೂ ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್) ಅಧಿಕಾರಿಗಳ ನಿರ್ಲಕ್ಷ್ಯದಿಂದ 78.24 ಕೋಟಿ ರೂ.ಮೌಲ್ಯದ ಜೀವರಕ್ಷಕ ಔಷಧಗಳು ಮಣ್ಣು ಪಾಲಾಗಿವೆ. ಸರ್ಕಾರ ನೀಡಿರುವ ಅಂಕಿ-ಅಂಶಗಳಿಂದ ಇದು ಬಹಿರಂಗವಾಗಿದೆ.

ನಿಗಮವು ಪ್ರತಿ ವರ್ಷ ನೂರಾರು ಕೋಟಿ ರೂ. ಮೌಲ್ಯದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಜೀವರಕ್ಷಕ ಔಷಧಗಳನ್ನು ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಪೂರೈಸುವ ಜವಾಬ್ದಾರಿ ಹೊತ್ತಿಕೊಂಡಿದೆ.ಇದಕ್ಕಾಗಿ ಪ್ರತಿ ವರ್ಷ ಟೆಂಡರ್ ನಡೆಸುವ ನಿಗಮ, ಎಲ್-1 ಪಡೆದ ಕಂಪನಿಗಳಿಗೆ ಔಷಧ ಪೂರೈಸಲು ಕಾರ್ಯಾದೇಶ ಪತ್ರ ನೀಡುತ್ತಿದೆ.
ಕಾರ್ಯಾದೇಶ ಪತ್ರ ಪಡೆಯುವ ಕಂಪನಿಗಳು ನಿಗಮದ ವ್ಯಾಪ್ತಿಯ ಔಷಧ ಉಗ್ರಾಣಗಳಿಗೆ ಔಷಧ ಸರಬರಾಜು ಮಾಡುತ್ತಿವೆ. ಉಗ್ರಾಣಗಳಲ್ಲಿ ದಾಸ್ತಾನು ಮಾಡಿಕೊಂಡು ಬೇಡಿಕೆ ಸಲ್ಲಿಸುವ ಆಸ್ಪತ್ರೆಗಳಿಗೆ ನಿಗಮ, ಔಷಧಗಳನ್ನು ಪೂರೈಸುತ್ತಿದೆ. ಆದರೆ, ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗೆ ಬಳಕೆಯಾಗಬೇಕಿದ್ದ 78.24 ಕೋಟಿ ರೂ.ಮೌಲ್ಯದ 379 ವಿವಿಧ ಜೀವ ರಕ್ಷಕ ಔಷಧಗಳು ಅವಧಿ ಮೀರಿದ್ದು, ಇವುಗಳನ್ನು ನಾಶಪಡಿಸಲಾಗಿದೆ. ಬಡವರ ಆರೋಗ್ಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷವೂ ನಿಗಮಕ್ಕೆ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ, ನಿಗಮದ ಅಧಿಕಾರಿಗಳ ಕರ್ತವ್ಯ ಲೋಪದಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಿದೆ.
98 ಎನ್‌ಎಸ್‌ಕ್ಯೂ ಔಷಧಗಳು ಪತ್ತೆ
2021-22 ರಿಂದ 2026ರ ಆಗಸ್ಟ್‌ವರೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಯೋಗಾಲಯದಲ್ಲಿ 98 (ಕಡಿಮೆ ಗುಣಟಮಟ್ಟ )ಎನ್‌ಎಸ್‌ಕ್ಯೂ ಔಷಧಗಳು ಪತ್ತೆಯಾಗಿವೆ. ಇದರಲ್ಲಿ ಅತಿ ಹೆಚ್ಚು ಮಾತ್ರೆ, ಸಿರಪ್, ಕ್ಯ್ಸಾಲ್‌ಗಳಿವೆ. 2020-21ರಿಂದ 2025-26ರವರೆಗೆ 15 ಕಳಪೆ ಔಷಧಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ನಕಲಿ ಔಷಧಗಳ ಸರಬರಾಜು ಮಾಡಿರುವ 26 ಔಷಧ ಕಂಪನಿಗಳ ಪೈಕಿ 6 ಕಂಪನಿಗಳ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗಿಸಲು ಅನುಮತಿ ಸಿಕ್ಕಿದೆ. ಉಳಿದ ಕಂಪನಿಗಳ ವಿರುದ್ಧ ತನಿಖೆಗೆ ಅನುಮತಿ ಸಿಕ್ಕಿಲ್ಲ. ಇದರಿಂದ ಕಳಪೆ ಔಷಧಗಳ ಸರಬರಾಜು ಮಾಡುವ ಕಂಪನಿಗಳು ವಿರುದ್ಧ ಪರಿಣಾಮಕಾರಿ ಕ್ರಮವಾಗುತ್ತಿಲ್ಲ.ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಮತ್ತು ಕರ್ನಾಟಕ ಮೂಲದ ಕಂಪನಿಗಳು ನಿಗಮಕ್ಕೆ ಸರಬರಾಜು ಮಾಡಿರುವ ವಿವಿಧ ಔಷಧಗಳು ನಕಲಿ ಎಂಬುದು ಪ್ರಯೋಗಾಲಯದಲ್ಲಿ ಸಾಬೀತಾಗಿದೆ.ಕಳಪೆ ಔಷಧಗಳು ಪೂರೈಕೆಯಲ್ಲಿ ಹೆಚ್ಚಿನ ಕಂಪನಿಗಳು ಹಿಮಾಚಲ ಪ್ರದೇಶದಲ್ಲಿರುವುದು ಸರ್ಕಾರದ ದಾಖಲೆಯಿಂದ ಬಹಿರಂಗವಾಗಿದೆ.
ಔಷಧ ನಾಶಪಡಿಸಿರುವ ವಿವರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net