ಬೆಂಗಳೂರು: ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಹೋಟೆಲ್‌ಗಳ ಮೇಲಿನ ದಾಳಿ ಮುಂದುವರಿಸಿದ್ದು, ಬುಧವಾರ ರೇಸ್‌ಕೋರ್ಸ್ ರಸ್ತೆಯ ಸೌತ್ ರುಚಿ ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ನೈರ್ಮಲ್ಯದ ಕೊರತೆ ಕಂಡುಬಂದಿದ್ದು, ಅವಧಿ ಮೀರಿದ ಹಾಗೂ ತಪ್ಪು ಲೇಬಲ್‌ಗಳಿಂದ ಕೂಡಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಹೋಟೆಲ್ ವ್ಯವಸ್ಥೆ ಕುರಿತು ಬಂದಿದ್ದ ದೂರಿನ ಮೇರೆಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು
ಅವಧಿ ಮೀರಿದ ಕೋಕೋನಟ್ ಪೌಡರ್ 1 ಕೆ.ಜಿ., ಸೌತ್ ರುಚಿ ಚಟ್ನಿ ಪುಡಿ 800 ಗ್ರಾಂ., ರಸಂ ಪುಡಿ 200 ಗ್ರಾಂ, ಮಶ್ರೂಮ್ 1 ಪ್ಯಾಕ್ ಹಾಗೂ ತಪ್ಪು ಲೇಬಲ್ ಹೊಂದಿದ್ದ ಬೆಲ್ಲದ ಪುಡಿ 5 ಕೆ.ಜಿ., ಮಿಲೆಟ್ 45 ಕೆ.ಜಿ., ಅಜ್ವಾನ್ 2 ಕೆ.ಜಿ., ಬಕೆಟ್ ಬೆಲ್ಲ 121 ಕೆ.ಜಿ. ವಶಪಡಿಸಿಕೊಂಡಿದ್ದಾರೆ.
ಇದೇ ಅಲ್ಲದೆ ಆಹಾರ ಸಂಗ್ರಹಣೆ ಸ್ಥಳದಲ್ಲಿ ಹಾಗೂ ಅಡುಗೆ ತಯಾರಿಕೆ ಸ್ಥಳದಲ್ಲಿ ಜಿರಳೆ ಸೇರಿ ಕೀಟಗಳು ಕಂಡುಬಂದಿದ್ದು, ನೈರ್ಮಲ್ಯ ಪಾಲಿಸದ ಕಾರಣ ಹೋಟೆಲ್‌ನ ಬಾಗಿಲು ಮುಚ್ಚುವಂತೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಸುವ ಆಹಾರ ಉದ್ದಿಮೆಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ನಿಯಮಗಳು 2011ರ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.