ಜೆಡಿಎಸ್‌ನಲ್ಲಿರುವ ಪಕ್ಷದ್ರೋಹಿಗಳನ್ನು ಉಚ್ಚಾಟಿಸಿ

ಕುರಬರಹಳ್ಳಿ ನಾಗೇಶ್
ಕುರಬರಹಳ್ಳಿ ನಾಗೇಶ್
Published on
ಕೆ.ಆರ್.ಪೇಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಅನ್ಯ ಪಕ್ಷದ ಜತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದರೂ ನಾನಿನ್ನೂ ಜೆಡಿಎಸ್ ಎಂದು ಹೇಳಿಕೊಂಡು ತಿರುಗುತ್ತಿರುವವರ ಬಗ್ಗೆ ಪಕ್ಷದ ವರಿಷ್ಠರು ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬೇಕು ಎಂದು ತಾಲೂಕಿನ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ.
ಶೀಘ್ರವೇ ಕಾರ್ಯಕರ್ತರ ಸಭೆ ಕರೆದು ಅಗತ್ಯ ನಿರ್ಣಯ ಕೈಗೊಂಡು ಪಕ್ಷ ದ್ರೋಹಿಗಳನ್ನು ಪಕ್ಷದಿಂದ ಉಚ್ಚಾಟಿಸಲು ಕ್ರಮ ವಹಿಸುವಂತೆ ಶಾಸಕ ಎಚ್.ಟಿ.ಮಂಜು ಅವರನ್ನು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರಬರಹಳ್ಳಿ ನಾಗೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜೆಡಿಎಸ್ ಯಾವುದೇ ವ್ಯಕ್ತಿ ಆಧಾರಿತ ಪಕ್ಷ ಅಲ್ಲ. ಅದು ಕಾರ್ಯಕರ್ತರ ಪಕ್ಷ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಲ್ಲಿದ್ದು ಬೆಳೆದ ಅತಿರಥ ಮಹಾರಥ ನಾಯಕರು ಸಂಕಷ್ಠದ ಸಮುಯದಲ್ಲಿ ಪಕ್ಷಕ್ಕೆ ಕೈಕೊಟ್ಟು ಹೊರ ಹೋಗಿದ್ದಾಗಲೂ ಅದರಿಂದ ವಿಚಲಿತರಾಗದೆ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಉಳಿಸಿ ಬೆಳೆಸಿದ್ದಾರೆ. ಕಾರ್ಯಕರ್ತರು ಬಲಿಷ್ಠರಾಗಿರುವವರೆಗೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ದುರ್ಭಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಕರ್ತರ ಬಲದಿಂದಲೇ ಎಚ್.ಟಿ.ಮಂಜು ಇಂದು ಕ್ಷೇತ್ರದ ಶಾಸಕರಾಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವುದನ್ನೆ ನಿತ್ಯ ಕಾಯಕವನ್ನಾಗಿಸಿಕೊಂಡಿರುವ ಕೆಲವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಸಾಲು ಧರಿಸಿಕೊಂಡು ಭಾಗವಹಿಸಿ ಅದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ರಾಜಕೀಯ ಅನೈತಿಕತೆಯನ್ನು ಮೆರೆದಿದ್ದಾರೆ ಎಂದು ದೂರಿದರು.
ಪಕ್ಷದ ಮುಖಂಡರಾದ ಕುರುಬರಹಳ್ಳಿ ನಾಗೇಶ್, ದಿಶಾ ಸಮಿತಿ ಸದಸ್ಯ ನರಸನಾಯಕ್, ಜೆಡಿಎಸ್ ರೈತ ಮೋರ್ಚಾ ಘಟಕದ ಅಧ್ಯಕ್ಷ ಬೂಕನಕೆರೆ ಹುಲ್ಲೇಗೌಡ, ತಾಪಂ ಮಾಜಿ ಸದಸ್ಯ ಐಕನಹಳ್ಳಿ ಕೃಷ್ಣೇಗೌಡ, ಬಲ್ಲೇನಹಳ್ಳಿ ರಾಮಚಂದ್ರನ್, ಆಲಂಬಾಡಿ ಕಾವಲು ಕರಿಶೆಟ್ಟಿ, ಮಂಬಳ್ಳಿ ಕಾಂತರಾಜು, ಬೇಲದಕೆರೆ ನಂಜಪ್ಪ, ಬೈರಾಪುರ ಹರೀಶ್, ಚಟ್ಟೇನಹಳ್ಳಿ ದೀಪು ಸೇರಿದಂತೆ ಹಲವರಿದ್ದು ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net