ಕರ್ತವ್ಯ ಆ್ಯಪ್‌ಗೆ ಅಬಕಾರಿ, ಆರ್‌ಡಿಪಿಆರ್ ವಿರೋಧ: ರಾತ್ರಿ ವೇಳೆ ಅನಾಹುತವಾದರೆ ಹೊಣೆ ಯಾರು?- 'Kartavya App Attendance

ಕರ್ತವ್ಯ ಆ್ಯಪ್’ಗೆ ಸರ್ಕಾರಿ ನೌಕರರ ವಿರೋಧ
ಕರ್ತವ್ಯ ಆ್ಯಪ್’ಗೆ ಸರ್ಕಾರಿ ನೌಕರರ ವಿರೋಧ
Published on
ಬೆಂಗಳೂರು:ಸರ್ಕಾರಿ ಕೆಲಸಕ್ಕೆ ಗೈರಾಗುವವರನ್ನು ನಿಯಂತ್ರಿಸುವ ಉದ್ದೇಶದಿಂದ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಆನ್‌ಲೈನ್ ಹಾಜರಾತಿ ದಾಖಲಿಸುವ ‘ಕರ್ತವ್ಯ ಆ್ಯಪ್’ಗೆ ಸರ್ಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸರ್ಕಾರದ ಅಧೀನದ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಮೊಬೈಲ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಮೇ 1 ಜಾರಿಗೆ ಬಂದಿದೆ. ಅದರನ್ವಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಬಂದಾಗ ಚೆಕ್‌ಇನ್‌ನಲ್ಲಿ ಹಾಗೂ ಸಂಜೆ ಕಚೇರಿಯಿಂದ ತೆರಳುವಾಗ ಚೆಕ್‌ಔಟ್‌ನಲ್ಲಿ ತಪ್ಪದೆ ಹಾಜರಾತಿ ದಾಖಲಿಸಬೇಕು. ಆದರೆ, ಹೊಸ ವ್ಯವಸ್ಥೆಗೆ ಮೊದಲು ಪೊಲೀಸ್ ಇಲಾಖೆಯಿಂದ ಅಪಸ್ವರ ವ್ಯಕ್ತವಾಯಿತು. ಇದೀಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಅಬಕಾರಿ ಸೇರಿ ಇತರ ಇಲಾಖೆಗಳ ನೌಕರರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕರ್ತವ್ಯ ತಂತ್ರಾಂಶ ಆಧಾರಿತ ಜಿಯೋ ಫೆನ್ಸಿಂಗ್ ಹಾಜರಾತಿ ಪದ್ದತಿಯು ಗ್ರಾಮೀಣ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ದೈನಂದಿನ ಕರ್ತವ್ಯ ನಿರ್ವಹಣೆಗೆ ಅತ್ಯಂತ ಕಠಿಣ ಸವಾಲು ಎದುರಾಗಲಿದೆ. ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನ ಸಮಸ್ಯೆಗಳು ಉಂಟಾಗುತ್ತಿದೆ. ಹಾಗಾಗಿ, ನಿಯಮದಿಂದ ವಿನಾಯಿತಿ ನೀಡಬೇಕು ಅಥವಾ ಸೂಕ್ತ ತಿದ್ದುಪಡಿ ತರಬೇಕೆಂದು ರಾಜ್ಯ ಪಂಚಾತ್ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ, ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದು ಮನವಿ ಮಾಡಿದೆ.
ಗ್ರಾಮೀಣ ಭಾಗದ ವಾಸ್ತವ ಸ್ಥಿತಿ ಹಾಗೂ ಪಿಡಿಒಗಳ ಕೆಲಸದ ಸ್ವರೂಪಕ್ಕೆ ಈ ಆ್ಯಪ್ ಸಂಪೂರ್ಣ ವ್ಯತಿರಿಕ್ತವಾಗಿದೆ. ಇದರಿಂದ ಉಂಟಾಗುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಘವು ಸರ್ಕಾರದ ಗಮನಕ್ಕೆ ತಂದಿದೆ. ತುರ್ತು ಸಾರ್ವಜನಿಕ ಸೇವೆಗಳು ಮತ್ತು ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ತೀವ್ರ ಅಡ್ಡಿ ಉಂಟಾಗಲಿದೆ. ಹಳ್ಳಿಗಳಲ್ಲಿ ಹಠಾತ್ ಕುಡಿಯುವ ನೀರಿನ ಪೈಪ್‌ಲೈನ್ ಒಡೆತ, ಬೋರ್‌ವೆಲ್ ಮೋಟಾರ್ ದುರಸ್ತಿ, ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಪಿಡಿಒಗಳು ತಕ್ಷಣ ಸ್ಥಳಕ್ಕೆ ಧಾವಿಸಬೇಕಿರುತ್ತದೆ. ಆದರೆ, ಇಂತಹ ಮಾನವೀಯ ಸೇವೆಗಿಂತ ಕಚೇರಿ ಆವರಣ ತಲುಪಿ ಹಾಜರಾತಿ ದಾಖಲಿಸುವುದೇ ಮುಖ್ಯ ಎಂಬ ನಿಯಮವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಲಿದೆ ಎಂದು ಸಚಿವರಿಗೆ ಬರೆದಿರುವ ಪತ್ರದಲ್ಲೇ ಸಂಘವು ಉಲ್ಲೇಖಿಸಿದೆ.
ಬಾಕ್ಸ್
ಅಬಕಾರಿ ನೌಕರರಿಗೆ ವಿನಾಯಿತಿ ಕೊಡಿ:
‘ಕರ್ತವ್ಯ ಆ್ಯಪ್’ಗೆ ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರಿಂದಲೂ ವಿರೋಧ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯಂತೆ ಅಬಕಾರಿ ಇಲಾಖೆಯಲ್ಲೂ ವಾರದ ಕವಾಯಿತು (ಪೆರೇಡ್ ) ಇರಲಿದೆ. ಬೆಳಗ್ಗೆ 7 ಗಂಟೆಗೆ ಪರೇಡ್ ಇರುವುದರಿಂದ ಕಚೇರಿಗೆ ತೆರಳಿ ಆನ್‌ಲೈನ್ ಹಾಜರಾತಿ ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮದ್ಯದಂಗಡಿಗಳು ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆವರೆಗೆ ಹಾಗೂ ಬೆಂಗಳೂರು ನಗರದಲ್ಲಿ ರಾತ್ರಿ 1ಗಂಟೆವರೆಗೆ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಕರ್ತವ್ಯ ಆ್ಯಪ್‌ನಲ್ಲಿ ಸಂಜೆ 5.30ಕ್ಕೆ ಚೆಕ್‌ಔಟ್‌ನಲ್ಲಿ ಹಾಜರಾತಿ ಹಾಕಿ ಮನೆಗೆ ತೆರಳಿದರೆ ನಂತರ ನಡೆಯುವ ಅಬಕಾರಿ ಅಪರಾಧಗಳಿಗೆ ಹೊಣೆ ಯಾರಾಗಲಿದ್ದಾರೆ. ಪೊಲೀಸ್, ಕಾರಾಗೃಹ, ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಯಂತೆ ಅಬಕಾರಿ ಇಲಾಖೆಯನ್ನು ‘ಅಗತ್ಯ’ ಇಲಾಖೆಯೆಂದು ಘೋಷಿಸಬೇಕು ಎಂದು ಅಬಕಾರಿ ನೌಕರರು ಮನವಿ ಮಾಡಿದ್ದಾರೆ.
‘ನಿಗದಿತ ಪಾಳಿ’ ನಿಗದಿಪಡಿಸಬೇಕು.ಸಂಜೆ ಹಾಜರಾತಿ ಹಾಕಿದ ಬಳಿಕ ಕೆಲಸ ಮಾಡಬೇಕಾ ಅಥವಾ ಬೇಡ ಎಂಬ ಗೊಂದಲ ಇದೆ.ಇದನ್ನು ಸರಿಪಡಿಸಬೇಕು. ಸಂಜೆ 7 ಗಂಟೆ ಬಳಿಕ ಅಬಕಾರಿ ಕೇಸ್‌ಗಳು ಹೆಚ್ಚು ಸಂಭವಿಸುತ್ತದೆ. ಹಾಗಾಗಿ, ಇದನ್ನು ತಡೆಯಲು ತಪಾಸಣೆ ಮಾಡಬೇಕಾಗುತ್ತದೆ. ದಿನದ 24 ಗಂಟೆಯಲ್ಲೂ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಅಧಿಕ ಕಾರ್ಯದೊತ್ತಡದಿಂದ ಅಧಿಕಾರಿಗಳು ಮಾನಸಿಕ ಸಮಸ್ಯೆಗೆಗಳಿಗೆ ಒಳಗಾಗಲಿದ್ದಾರೆ. ಕುಟುಂಬದವರಿಗೆ ಸಮಯ ನೀಡಲು ಆಗುವುದಿಲ್ಲ. ಇಂತಹ ಹಲವು ಸಮಸ್ಯೆಗಳಿವೆ. ಹಾಗಾಗಿ, ಅವೈಜ್ಞಾನಿಕ ಕರ್ತವ್ಯ ಆ್ಯಪ್ ಪದ್ಧತಿಯನ್ನು ತಕ್ಷಣ ಕೈಬಿಡಬೇಕೆಂದು ಎಂದು ಅಬಕಾರಿ ನೌಕರರು ಅಳಲು ತೋಡಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net