ವಚನ ಚಳವಳಿ ಮೂಲಕ ಜಾತಿರಹಿತ ಧರ್ಮ ಸ್ಥಾಪನೆ

ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲರು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ. ಆನಂದ ಕೆ., ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲರು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ. ಆನಂದ ಕೆ., ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ. ಪಾಟೀಲ ಅಭಿಮತ
  • ಜಿಲ್ಲಾಡಳಿತದಿಂದ ಬಸವ ಜಯಂತಿ ಆಚರಣೆ
  • ರಂಗಮಂದಿರದಲ್ಲಿ ಅದ್ದೂರಿ ಕಾರ್ಯಕ್ರಮ
ವಿಜಯಪುರ: ಸಮ ಸಮಾಜ ನಿರ್ಮಾಣಕ್ಕೆ ಮಹಾತ್ಮ ಬಸವೇಶ್ವರರು ಶ್ರಮಿಸಿದರು. ಡಾ. ಫ.ಗು. ಹಳಕಟ್ಟಿಯಂತವರು ಶರಣರ ವಚನಗಳನ್ನು ಬೆಳಕಿಗೆ ತಂದರು. ಈ ಸಮಾಜಕ್ಕೆ ಶರಣರ ಕೊಡುಗೆ ಅಪಾರ. ಬಸವ ನೆಲದಲ್ಲಿ ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಸವ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಅಸಮಾನತೆ, ಮೇಲು-ಕೀಳು ಅನಿಷ್ಟ ಪದ್ಧತಿ, ಮೂಢನಂಬಿಕೆ ತಾಂಡವವಾಡುತ್ತಿತ್ತು. ನಮ್ಮ ನೆಲದಲ್ಲಿ ಜನಿಸಿದ ಬಸವಣ್ಣ ವಚನಗಳ ಮೂಲಕ ಬಸವಾದಿ ಶರಣರ ಕಾಯಕ ದಾಸೋಹ ಕಲ್ಪನೆಯೊಂದಿಗೆ ಸಾಮಾಜಿಕ ಚಳವಳಿ ಮಾಡುವ ಮೂಲಕ ಸಮಸಮಾಜದ ಕನಸು ಕಂಡು ಆ ನಿಟ್ಟಿನಲ್ಲಿ ನಡೆದಿದ್ದಾರೆ ಎಂದರು.
ಸಮಾಜವಾದ ಸಿದ್ಧಾಂತ: ಕಾರ್ಲ್‌ಮಾರ್ಕ್ಸ್ ಅಂದು ಕಾಯಕಕ್ಕೆ ಗೌರವ ನೀಡಿದರು. ಅದಕ್ಕಿಂತ ಮುಂಚಿತವಾಗಿ ಬಸವಣ್ಣನವರ ಕಾಯಕ ಹಾಗೂ ದಾಸೋಹಕ್ಕೆ ಗೌರವ ಮತ್ತು ಘನತೆ ನೀಡಿದವರು. ಯಾವುದೇ ಕಾಯಕ ಸಣ್ಣದಲ್ಲ. ಬಸವಣ್ಣ ದಾಸೋಹದ ಪರಿಕಲ್ಪನೆ ನೀಡಿದರು. ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಜನರು ಇದ್ದರು. ಅಲ್ಲಿ ಕಾಯಕವೇ ಮಹತ್ವ ಪಡೆದಿತ್ತು ಎಂದು ಸಚಿವರು ಹೇಳಿದರು.
ಅಲ್ಲಮಪ್ರಭು ಅವರಂತಹ ಅನೇಕ ಶರಣರು ಎಲ್ಲ ವರ್ಗದ ಜನರು ಹಾಗೂ ಮಹಿಳೆಯರಿದ್ದರು. ಕಾಯಕದೊಂದಿಗೆ ಸರಳ ವಚನಗಳ ಮೂಲಕ ಜನ ಸಾಮಾನ್ಯರಿಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದರು. ಅತ್ಯಂತ ಸರಳವಾಗಿ ಜನರಿಗೆ ತಿಳಿಯುವ ಭಾಷೆಯಲ್ಲಿ ವಚನಗಳ ಸಾರ ಸಾರಿ ಸಾಮಾಜಿಕ ಸುಧಾರಣೆ, ಸಮಾನತೆ, ಸಮಸಮಾಜ ತರಲು ಬಸವಾದಿ ಶರಣರು ಕನಸು ಕಂಡವರು. ಅಂದು ಕ್ಲಿಷ್ಟಕರವಾದ ಪರಿಸ್ಥಿತಿ ಇತ್ತು. ಎಲ್ಲರೂ ಸಮಾನರು ಎಂದ ಅವರು ಮಹಿಳೆಯರಿಗೆ ಆ ಸಂದರ್ಭದಲ್ಲಿ ಸಮಾನತೆ ತಂದರು. ಅಂದಿನ ಮೌಢ್ಯಗಳನ್ನು ತೊಡೆದು ಹಾಕಲು ಚಳವಳಿ ನಡೆಸಿದರು. ವಚನ ಚಳವಳಿ ಮೂಲಕ ಜಾತಿರಹಿತ ಧರ್ಮ, ಸಮಾಜ ನಿರ್ಮಾಣ ಹಾಗೂ ಮಾನವರೆಲ್ಲ ಒಂದೇ ಎಂದು ಸಾರಿದರು. ದಯವೇ ಧರ್ಮದ ಮೂಲವಯ್ಯ, ಕಾಯಕವೇ ಕೈಲಾಸ ಎಂದು ಶರಣರು ಸಾರಿದ್ದನ್ನು ಉಲ್ಲೇಖಿಸಿದರು.
ಮಾನವೀಯತೆಯ ಹರಿಕಾರ: ಹಿರಿಯ ಸಾಹಿತಿ ಎಚ್.ಟಿ. ಪೋತೆ ಉಪನ್ಯಾಸ ನೀಡುತ್ತಾ, ಫ.ಗು. ಹಳಕಟ್ಟಿ ಅವರಂತಹ ಅನೇಕ ಮಹಾ ಪುರುಷರು ಈ ಜಿಲ್ಲೆಯಲ್ಲಿ ಆಗಿ ಹೋಗಿದ್ದಾರೆ. ಅಂತಹ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬುದಾಗಿ ಸರ್ಕಾರ ಘೋಷಿಸಿದ್ದು ಬಹುದೊಡ್ಡ ಸಾರ್ಥಕ ಕಾರ್ಯ ಎಂದರು.
ಬಸವಣ್ಣನವರ ಸಾಮಾಜಿಕ ಚಳವಳಿಯಲ್ಲಿ ಅನೇಕ ವಿವಿಧ ಕಾಯಕ ಜೀವಿಗಳು, ಇಪ್ಪತ್ತೈದು ಮಹಿಳೆಯರು ಒಂದೆಡೆ ಸೇರಿಕೊಂಡು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಮನುಷ್ಯತ್ವ ಹುಡುಕುತ್ತ ಹೊರಟ ಬಸವಣ್ಣ, ಮೌಢ್ಯತೆ ಕಂದಾಚಾರ ವಿರೋಧವಾಗಿ ಸಾಮಾಜಿಕ ಚಳವಳಿ ಮಾಡಿದರು. ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಚನಗಳ ಮೂಲಕ ಸ್ಪಂದಿಸಿದ್ದಾರೆ ಎಂದರು.
ಬಸವಣ್ಣನವರು ದಾಸೋಹ ಸಂಸ್ಕೃತಿ ಜಾರಿಗೊಳಿಸಿದರು. ಹಸಿವಿನಿಂದ ಯಾರೂ ಬಳಲಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ತಂದಿದ್ದು, ಆ ಯೋಜನೆಯಡಿ ಬಸವಾದಿ ಶರಣರ ಆಶಯವಿದೆ. ಬಸವಣ್ಣನವರು ಮೌಢ್ಯತೆ ತೊಡೆದು ಹಾಕಲು ಕೆಲಸ ಮಾಡಿದರು. ಹನ್ನೆರಡನೇ ಶತಮಾನದ ಬಸವಣ್ಣ ರಾಜ ತಂತ್ರಜ್ಞ, ವಿಜ್ಞಾನಿಯಾಗಿದ್ದ, ಸಕಲರಿಗೆ ಲೇಸ ಬಯಸುವ ಗುಣಗಳನ್ನು ಬಸವಣ್ಣನವರು ಹೊಂದಿದ್ದರು. ಶಿವಭಕ್ತರಲ್ಲಿ ವ್ಯತ್ಯಾಸ ಕಾಣಲಿಲ್ಲ. ಬಸವಣ್ಣನವರ ವಚನ ಚಳವಳಿಯಲ್ಲಿ ಕಾಯಕ ದಾಸೋಹ ಮೊದಲ ಆದ್ಯತೆಯಾಗಿತ್ತು. ಅವರೆಲ್ಲರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅರಿವೇ ಗುರು ಎಂಬ ಸಂದೇಶ ಸಾರಿದವರು. ಅವರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ವಿಠ್ಠಲ ಕಟಕಧೋಂಡ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸಿಇಒ ರಿಷಿ ಆನಂದ ವಚನ ಗಾಯನ ಪ್ರಸ್ತುತ ಪಡಿಸಿ ಗಮನ ಸೆಳೆದರು. ಮೇಯರ್ ಮಡಿವಾಳಪ್ಪ ಕರಡಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಮಾಜಿ ಶಾಸಕ ರಾಜು ಆಲಗೂರ, ಪಾಲಿಕೆ ಸದಸ್ಯ ರಾಜು ಮಗಿಮಠ, ಸಂತೋಷ ಭೋವಿ, ಘನಶ್ಯಾಮ ತೊಶ್ನಿವಾಲ ಇತರರಿದ್ದರು. ಶ್ರೀದೇವಿ ಭಂಡಾರಿಕರ ವಚನಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮ ಬಳಿಕ ಭಗವಂತನ ಮರಣ ನಾಟಕ ಪ್ರದರ್ಶನ ಕಂಡಿತು.
"

ಗಮನಸೆಳೆದ ಸ್ತಬ್ಧ ಚಿತ್ರಗಳು

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು, ಬಂಥನಾಳ ಶಿವಯೋಗಿಗಳು, ಶತಮಾನದ ಸಂತ ಸಿದ್ಧೇಶ್ವರ ಸ್ವಾಮೀಜಿ, ವಚನ ಕಟ್ಟುಗಳ ಮೆರವಣಿಗೆ, ಕಲ್ಯಾಣ ಮಂಟಪ ಹಾಗೂ ವಚನ ಪಿತಾಮಹ ಫ.ಗು. ಹಳಕಟ್ಟಿ ಸೇರಿ 12ನೇ ಶತಮಾನದ ಬಸವಾದಿ ಶರಣರ ಸ್ತಬ್ಧ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊಂಡ ಜಗಜ್ಯೋತಿ ಬಸವೇಶ್ವರ ಭಾವಚಿತ್ರದ ಮೆರವಣಿಗೆಗೆ ಸಚಿವ ಡಾ. ಎಂ.ಬಿ. ಪಾಟೀಲ ಅವರು ಚಾಲನೆ ನೀಡಿದರು. ಬಳಿಕ ತಾವು ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು. ಬಸವೇಶ್ವರ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲರು ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net