ಜೈನ ನಿಗಮ ಸ್ಥಾಪನೆ ಕುರಿತು ಜೈನ ಸಮುದಾಯದ ಮಹಾರಾಜರು ಹಾಗೂ ಮುಖಂಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಮನವಿ ಮಾಡಿದರು. ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಪಂಡಿತಾಚಾರ್ಯ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ವೀರಕುಮಾರ ಪಾಟೀಲ, ಉತ್ತಮ ಪಾಟೀಲ, ಧೂಳಗೌಡ ಪಾಟೀಲ ಇತರರಿದ್ದರು.
ಜೈನ ಸಮುದಾಯದ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಜೈನ ಸಮುದಾಯದ ಭಟ್ಟಾರಕ ಮಹಾರಾಜರು ಹಾಗೂ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
ರಾಷ್ಟ್ರ ಸಂತ ಆಚಾರ್ಯ 108 ಗುಣಧರನಂದಿ ಮಹಾರಾಜರ ಜನ್ಮದಿನದ ಅಂಗವಾಗಿ ನಡೆಯಲಿರುವ ವಿಶೇಷ ಕಾರ್ಯಕ್ರಮಕ್ಕೆ ಸಿಎಂಗೆ ಆಮಂತ್ರಣ ನೀಡಿ, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಜೈನ ಸಮುದಾಯಕ್ಕೆ ನಿಗಮ ಸ್ಥಾಪಕಬೇಕೆಂದು ಹಲವು ವರ್ಷಗಳ ಬೇಡಿಕೆ ಇದೆ. ರಾಷ್ಟ್ರ ಸಂತ ಗುಣಧರನಂದಿ ಮಹಾರಾಜರು ಜೈನ ಸಮ್ಮೇಳನ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿ ನಿಗಮ ಸ್ಥಾಪಿಸಬೇಕು ಎಂದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಜೈನ ಸಮುದಾಯಕ್ಕೆ ನಿಗಮದ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿ ಸಕಾರಾತ್ಮಕ ಸಹಕಾರ ಕೊಡಲಾಗುವುದು ಎಂದು ಭರವಸೆ ನೀಡಿದರು.