5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ‘ಇಎಸ್-ಜೆಆರ್’ ಕೋರ್ಸ್: ಉತ್ತರ ಕರ್ನಾಟಕ ವಿದ್ಯಾರ್ಥಿಗಳ ಉದ್ಯೋಗಕ್ಕೆ ಒತ್ತು

ಕಾಲೇಜು ಶಿಕ್ಷಣ ಇಲಾಖೆ
ಕಾಲೇಜು ಶಿಕ್ಷಣ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ಪದವಿ ಕಾಲೇಜುಗಳಲ್ಲಿ ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ ಸೇರಿ ಇತರೆ ಕೋರ್ಸ್‌ಗಳಲ್ಲಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅನುಸಾರವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ
  • 50 ಗಂಟೆಗಳ ‘ಇಎಸ್-ಜೆಆರ್’ ಅನ್ನು 2026-27ನೇ ಶೈಕ್ಷಣಿಕ ಸಾಲಿಗೆ ಸೇರ್ಪಡೆ ಮಾಡಲಾಗುತ್ತಿದೆ.
  • ಉದ್ಯೋಗಾಧಾರಿತ ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕದ ಆಧಾರದಲ್ಲಿ 2 ಕ್ರೆಡಿಟ್ ಸ್ಕೋರ್ ನೀಡುವಂತೆಯೂ ಕಾಲೇಜು ಶಿಕ್ಷಣ ಇಲಾಖೆಯು ಸೂಚಿಸಿದೆ.
ಬೆಂಗಳೂರು: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ‘ಎಂಪ್ಲಾಬಿಲಿಟಿ ಸ್ಕಿಲ್ಸ್-ಜಾಬ್ ರೆಡಿ’ (ಇಎಸ್-ಜೆಆರ್) ಎಂಬ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆಯು ಅನುಷ್ಠಾನ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗೆ 2 ಕ್ರೆಡಿಟ್ ಸ್ಕೋರ್ ಕೂಡ ದೊರೆಯುತ್ತಿದೆ.
ಪದವಿ ಕಾಲೇಜುಗಳಲ್ಲಿ ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ ಸೇರಿ ಇತರೆ ಕೋರ್ಸ್‌ಗಳಲ್ಲಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅನುಸಾರವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 50 ಗಂಟೆಗಳ ‘ಇಎಸ್-ಜೆಆರ್’ ಅನ್ನು 2026-27ನೇ ಶೈಕ್ಷಣಿಕ ಸಾಲಿಗೆ ಸೇರ್ಪಡೆ ಮಾಡಲಾಗುತ್ತಿದೆ. ವಾಧ್ವಾನಿ ೌಂಡೇಷನ್‌ನ್ನಿನ ಈ ಕೋರ್ಸ್ ಅನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವಂತೆ ಸೂಚಿಸಿದೆ.

ವಿದ್ಯಾರ್ಥಿಗಳಿಗೆ 2 ಕ್ರೆಡಿಟ್ ಸ್ಕೋರ್:

ಉದ್ಯೋಗಾಧಾರಿತ ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕದ ಆಧಾರದಲ್ಲಿ 2 ಕ್ರೆಡಿಟ್ ಸ್ಕೋರ್ ನೀಡುವಂತೆಯೂ ಕಾಲೇಜು ಶಿಕ್ಷಣ ಇಲಾಖೆಯು ಸೂಚಿಸಿದೆ. ಇದನ್ನು ಯುಜಿಸಿ ನಿಯಮಗಳನ್ವಯ ಗರಿಷ್ಠ 160 ಕ್ರೆಡಿಟ್ ಮೀರದಂತೆ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ನೇರವಾಗಿ ಯುಯುಸಿಎಂಎಸ್ ಮೂಲಕ ಸೇರ್ಪಡೆ ಮಾಡುವಂತೆ ಸರ್ಕಾರವು ಆದೇಶಿಸಿದೆ.

ಆರಂಭದಲ್ಲಿ 56 ಕಾಲೇಜುಗಳಲ್ಲಿ ಅನುಷ್ಠಾನ

ಈ ಕಾರ್ಯಕ್ರಮವನ್ನು ಆರಂಭದ 2026-27ನೇ ಶೈಕ್ಷಣಿಕ ವರ್ಷದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಗಳ ಸಂಯೋಜನೆ ಪಡೆದಿರುವ ಕ್ರಮವಾಗಿ 33 ಮತ್ತು 23 ಸೇರಿ 56 ಕಾಲೇಜುಗಳಲ್ಲಿ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ. ಮೊದಲ ಶೈಕ್ಷಣಿಕ ವರ್ಷದಲ್ಲಿನ ಪರಿಣಾಮದ ಆಧಾರದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಳಯಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಕಾರ್ಯಕ್ರಮ ಅನುಷ್ಠಾನ ಹೇಗೆ?

- ‘ಇಎಸ್-ಜೆಆರ್’ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕಾಲೇಜಿನ ಒಬ್ಬರು ಬೋಧಕರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಬೇಕು
- ‘ಟ್ರೈನ್ ದಿ ಟ್ರೈನರ್’ ಪದ್ಧತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ವಾಧ್ವಾನಿ ೌಂಡೇಷನ್ ಪಠ್ಯಕ್ರಮವನ್ನು ಮೊದಲು ಬೋಧಕರಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ತರಬೇತಿ ಪಡೆದ ಬೋಧಕರು ವಿದ್ಯಾರ್ಥಿಗಳಿಗೆ ಬೋಧಿಸಲಿದ್ದಾರೆ
- ಈ ಕಾರ್ಯಕ್ರಮವನ್ನು ಯುಯುಸಿಎಂಎಸ್‌ನಲ್ಲಿ ಮ್ಯಾಪಿಂಗ್ ಮಾಡಲು ಕೂಡಲೇ ಕ್ರಮ ವಹಿಸುವಂತೆ ಸೂಚಿಸಲಾಗಿದೆ
- ಈ ಪತ್ರಿಕೆಗೆ ವಿವಿ ಅಧ್ಯಯನ ಮಂಡಳಿ, ಅಧ್ಯಯನ ಪರಿಷತ್ತು ಮತ್ತು ಪರೀಕ್ಷಾ ಮಂಡಳಿಗಳ ಅನುಮೋದನೆ ಹಾಗೂ ಅಂಗೀಕಾರಕ್ಕೆ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ
- ಪ್ರತಿ ತಿಂಗಳು ವಿದ್ಯಾರ್ಥಿಗಳಿಂದ ಹಿಮ್ಮಾಹಿತಿ ಪಡೆದು ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗೆ ಪ್ರಗತಿ ವರದಿ ನೀಡುವಂತೆ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net