

ತೂಬಗೆರೆ :
ನವೀಕರಿಸಲಾಗದ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವಲ್ಲಿ ಜೈವಿಕ ಇಂಧನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿಜ್ಞಾನಿ ಡಾ.ನಿಂಗರಾಜು ಹೇಳಿದರು.
ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯಲ್ಲಿ ಮಾತನಾಡಿ, ಕೃಷಿ ಅವಶೇಷಗಳು, ಜೈವಿಕ ತ್ಯಾಜ್ಯ ಹಾಗೂ ವಿವಿಧ ಸಸ್ಯ ಮೂಲಗಳಿಂದ ಜೈವಿಕ ಇಂಧನಉತ್ಪಾದಿಸುವ ಮೂಲಕ ಇಂಧನದ ಪರ್ಯಾಯ ಮೂಲಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರವು ಅಪಾರ ಪ್ರಮಾಣದ ಜೈವಿಕ ಸಂಪನ್ಮೂಲಗಳಾದ ಭತ್ತದ ಹುಲ್ಲು, ಕಬ್ಬಿನ ತ್ಯಾಜ್ಯ, ಜೋಳದ ಅವಶೇಷಗಳು, ತೆಂಗಿನ ಚಿಪ್ಪು, ವಿವಿಧ ಕೃಷಿ ತ್ಯಾಜ್ಯ ಮುಂತಾದವುಗಳನ್ನು ಉತ್ಪಾದಿಸುತ್ತದೆ. ಇವುಗಳನ್ನು ಸೂಕ್ತ ತಂತ್ರಜ್ಞಾನದ ಮೂಲಕ ಇಂಧನವಾಗಿ ಪರಿವರ್ತಿಸಬಹುದು. ಇದರ ಮೂಲಕ ಕೃಷಿ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದರ ಜತೆಗೆ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ರೈತರು ತಮ್ಮ ಜಮೀನಿನ ಬದುಗಳಲ್ಲಿ ಆಹಾರ ಬೆಳೆಗಳ ಉತ್ಪಾದನೆಗೆ ಧಕ್ಕೆಯಾಗದ ರೀತಿಯಲ್ಲಿ ಹೊಂಗೆ, ಬೇವು, ಹಿಪ್ಪೆ, ಸುರಹೊನ್ನೆಯಂತಹ ಜೈವಿಕ ಮರಗಳನ್ನು ಬೆಳೆಸಬೇಕು. ಅವುಗಳಿಂದ ದೊರೆಯುವ ಎಣ್ಣೆ ಜೈವಿಕ ಇಂಧನ ಉತ್ಪಾದನೆಗೆ ಸಹಕಾರಿ.ಇದರಿಂದ ರೈತರ ಆದಾಯದಲ್ಲೂ ಸುಧಾರಣೆ ಕಾಣಬಹುದಾಗಿದೆ ಎಂದರು. ಜಿಲ್ಲೆಯ ವಿವಿಧ ಭಾಗಗಳ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.