ತಿ.ನರಸೀಪುರ: ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಿರಿಯೂರು ವೀರೇಂದ್ರ (ನವೀನ್) ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆಡಳಿತಾರೂಢ ಸರ್ಕಾರ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದರು. ಗ್ಯಾರಂಟಿ ಯೋಜನೆಗಳು ಜಾರಿಯಾಗಿ ಮೂರು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಗಿಡ ನೆಡುವ ಮೂಲಕ ಸಂಭ್ರಮಾಚರಣೆ ಆಯೋಜಿಸಬೇಕು. ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ನಿರ್ದೇಶನದಂತೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಬೇಕು. ಅಲ್ಲದೆ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ತಲಾ ಒಬ್ಬ ಫಲಾನುಭವಿಯನ್ನು ಆಯ್ಕೆ ಮಾಡಿ ಗೌರವಿಸಬೇಕು ಎಂದರು.
ತಾಂ ಪ್ರಭಾರ ಇಒ ಡಾ.ಕೆ.ರಂಗಸ್ವಾಮಿ ಮಾತನಾಡಿ, ಆ.10ರೊಳಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಪೂರ್ಣಗೊಳಿಸಿ, ಆಯ್ಕೆಯಾದ ಫಲಾನುಭವಿಗಳ ಮಾಹಿತಿಯನ್ನು ತಾಲೂಕು ಅನುಷ್ಠಾನ ಸಮಿತಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಮೂರು ವರ್ಷಗಳ ಸಂಭ್ರಮಾಚರಣೆಯ ಬ್ಯಾನರ್ ಅಳವಡಿಕೆ ಕಡ್ಡಾಯವಾಗಿದ್ದು, ಎಲ್ಲ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಸದಸ್ಯರಾದ ಕೇತಹಳ್ಳಿ ಸಿದ್ದಶೆಟ್ಟಿ, ಮಲ್ಲಾಜಮ್ಮ, ದೊಡ್ಡಪುರ ಡಿ.ಪರಶಿವಮೂರ್ತಿ, ಎಸ್. ಮಂಜುನಾಥ್ ಅಭಿಲಾಷ್, ನೀಲಸೋಗೆ ಮಹದೇವಪ್ರಸಾದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಾ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ.ಕೆಂಪರಾಜು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ, ಸೆಸ್ಕ್ ಎಇಇಗಳಾದ ಕೆ.ವಿ.ವೀರೇಶ್ ಹಾಗೂ ಹರ್ಷನ್, ವಿವಿಧ ಗ್ರಾಪಂಗಳ ಪಿಡಿಒಗಳು ಮತ್ತು ಅಧಿಕಾರಿಗಳಿದ್ದರು.