ರೈತರಿಂದ ತಪ್ಪದೆ ಬೆಳೆ ವಿಮೆ ಮಾಡಿಸಿ

ಯಾದಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಕೃತಿ ವಿಕೋಪ, ಕುಡಿಯುವ ನೀರು ಸರಬರಾಜು ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ ಜೈನ್​ ಮಾತನಾಡಿದರು. ಡಿಸಿ ರಾಹುಲ್​ ಪಾಂಡ್ವೆ, ಜಿಪಂ ಸಿಇಒ ಲವೀಶ್​ ಒರ್ಡಿಯಾ, ಅಪರ ಡಿಸಿ ರಮೇಶ ಕೋಲಾರ, ಎಸಿ ಶ್ರೀಧರ್​ ಗೋಟುರ ಇತರರಿದ್ದರು.
ಯಾದಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಕೃತಿ ವಿಕೋಪ, ಕುಡಿಯುವ ನೀರು ಸರಬರಾಜು ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ ಜೈನ್​ ಮಾತನಾಡಿದರು. ಡಿಸಿ ರಾಹುಲ್​ ಪಾಂಡ್ವೆ, ಜಿಪಂ ಸಿಇಒ ಲವೀಶ್​ ಒರ್ಡಿಯಾ, ಅಪರ ಡಿಸಿ ರಮೇಶ ಕೋಲಾರ, ಎಸಿ ಶ್ರೀಧರ್​ ಗೋಟುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ ಜೈನ್​ ತಾಕೀತು
  • ಪ್ರಗತಿ ಪರಿಶೀಲನಾ ಸಭೆ
ಯಾದಗಿರಿ: ಮಳೆ ಕೊರತೆ ಹಿನ್ನೆಲೆಯಲ್ಲಿ ಬೆಳೆವಾರು ಬೆಳೆ ವಿಮೆ ಕಡ್ಡಾಯ ಮಾಡುವ ಕುರಿತು ರೈತರಿಗೆ ತಿಳಿವಳಿಕೆ ನೀಡುವಂತೆ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ ಜೈನ್​ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರಕೃತಿ ವಿಕೋಪ, ಕುಡಿಯುವ ನೀರು ಸರಬರಾಜು ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಳೆ ಮತ್ತು ನೀರಿನ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸಬಾರದು. ಬೆಳೆ ವಿಮೆ ನೋಂದಣಿಗೆ ಕಡೆಯ ದಿನಾಂಕದವರೆಗೆ ಕಾಯದೆ ಯುದ್ಧೋಪಾದಿಯಲ್ಲಿ ವಿಮೆ ಮಾಡಿಸಬೇಕು ಎಂದರು.
ಭತ್ತ ಹಾಗೂ ಕಬ್ಬು ಬೆಳೆಗೆ ಹೆಚ್ಚಿನ ನೀರು ವ್ಯಯವಾಗುವುದರಿಂದ ಪರ್ಯಾಯ ಬೆಳೆ ಬೆಳೆಯುವಂತೆ ರಸಗೊಬ್ಬರ ವಿತರಣೆ ವೇಳೆ ಕೃಷಿಕರಿಗೆ ತಿಳಿಹೇಳಬೇಕು. ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ಮಳೆಯಾಶ್ರಿತ ಉದ್ದು, ಹೆಸರು, ಸೂರ್ಯಕಾಂತಿ, ತೊಗರಿ, ನೀರಾವರಿ ಮತ್ತು ಮಳೆಯಾಶ್ರಿತ ಹತ್ತಿ, ಸಜ್ಜೆ, ತೊಗರಿ ಹೀಗೆ ವಿವಿಧ ಬೆಳೆಗಳಿಗೆ ವಿಮೆ ಸೌಲಭ್ಯ ಇದ್ದು, ಮೆಣಸಿನಕಾಯಿ ಇತ್ಯಾದಿ ತೋಟಗಾರಿಕೆ ಬೆಳೆಗಳಿಗೂ ಕಡ್ಡಾಯ ವಿಮೆ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.
ಬಸವಸಾಗರದಲ್ಲಿ ಐದು ಟಿಎಂಸಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಸದ್ಯ 5 ಟಿಎಂಸಿ ಕಾಯ್ದಿರಿಸಲಾಗಿದೆ. ಸಮಯ ಬಂದಾಗ ಕುಡಿಯಲು ಬಿಟ್ಟಾಗ ನೀರು ಪೋಲಾಗದಂತೆ ನಿಗಾ ವಹಿಸಬೇಕು. ಜಾಕ್​ವೆಲ್​ ಅಥವಾ ನದಿ ಸಮೀಪದ ಕೆರೆಗಳ ವ್ಯಾಪ್ತಿಯಲ್ಲಿ ನೀರು ಸಂಗ್ರಹಣೆಗೆ ವಿಶೇಷ ಗಮನ ನೀಡಬೇಕು ಎಂದು ಮನೋಜ್​ ಜೈನ್​ ಸೂಚಿಸಿದರು.
ಬಸವಸಾಗರ ಜಲಾಶಯ ಕೆಳಭಾಗದಲ್ಲಿ ನೀರು ಬಿಟ್ಟ ವೇಳೆ ಭತ್ತಕ್ಕಾಗಿ ಬಳಸದಂತೆ, ಅನಧಿಕೃತವಾಗಿ ಪಂಪ್​ಗಳ ಮೂಲಕ ನೀರು ಎತ್ತುವುದನ್ನು ನಿಯಂತ್ರಿಸಬೇಕು. ವಿಶೇಷವಾಗಿ ಸುರಪುರ, ಶಹಾಪುರ ತಾಲೂಕು ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಬೇಕು. ಮುಂದಿನ ನಾಲ್ಕೆದು ತಿಂಗಳು ಬೇಕಾಗುವಷ್ಟು ನೀರು ಸಂಗ್ರಹದತ್ತ ವಿಶೇಷ ಗಮನಹರಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್​ ಒರ್ಡಿಯಾ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್​ ಗೋಟುರ ಇತರರಿದ್ದರು.
ಜಲಧಾರೆ ಯೋಜನೆ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಿ
ಕುಡಿಯುವ ನೀರಿನ ಮಹತ್ವಾಕಾಂ ಯೋಜನೆ ಜಲಧಾರೆಗೆ ತೊಡಕು ಉಂಟಾಗದಂತೆ ಸಂಬಂಧಿತ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೈನ್​ ಹೇಳಿದರು. ವಿಶೇಷವಾಗಿ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ, ಕೆಬಿಜೆಎನ್​ಎಲ್​, ನೀರಾವರಿ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ತೊಡಕು ಉಂಟು ಮಾಡುವವರ ವಿರುದ್ಧ ಎಫ್​ಐಆರ್​ ದಾಖಲಿಸುವ ಜತೆ ಸರ್ಕಾರದ ಮಟ್ಟದಿಂದಲೂ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆ ಇದಾಗಿದ್ದರಿಂದ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ನಿಗಾವಹಿಸಬೇಕು. ಸದ್ಯಕ್ಕಿರುವ ಸಮಸ್ಯೆ ಪರಿಹರಿಸಿಕೊಂಡ ಬಗ್ಗೆ ತಣ ಜಿಪಂ ಸಿಇಒಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net