ಸ್ಮಶಾನಕ್ಕೆ ತೆರಳುವ ರಸ್ತೆ ಅತಿಕ್ರಮಣ

ಒತ್ತುವರಿಯಾಗಿರುವ ಸ್ಮಶಾನದ ರಸ್ತೆಯನ್ನು ತೆರೆವುಗೊಳಿಸುವಂತೆ ಭೈರನತ್ತ ಗ್ರಾಮದ ಆದಿಜಾಂಭವ ಸಮುದಾಯ ಮುಖಂಡರು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರಲ್ಲಿ ಮನವಿ ಮಾಡಿದರು. ಮಾದೇವ, ಸುದೇಶ್, ಮಹೇಶ್, ಶಂಭುಲಿಂಗ ಇತರರು ಇದ್ದರು.
ಒತ್ತುವರಿಯಾಗಿರುವ ಸ್ಮಶಾನದ ರಸ್ತೆಯನ್ನು ತೆರೆವುಗೊಳಿಸುವಂತೆ ಭೈರನತ್ತ ಗ್ರಾಮದ ಆದಿಜಾಂಭವ ಸಮುದಾಯ ಮುಖಂಡರು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರಲ್ಲಿ ಮನವಿ ಮಾಡಿದರು. ಮಾದೇವ, ಸುದೇಶ್, ಮಹೇಶ್, ಶಂಭುಲಿಂಗ ಇತರರು ಇದ್ದರು.
Published on
ಹನೂರು: ಗ್ರಾಮದಲ್ಲಿ ತಲೆದೂರಿರುವ ಸ್ಮಶಾನಕ್ಕೆ ತೆರಳುವ ರಸ್ತೆಯ ಒತ್ತುವರಿ ತೆರೆವುಗೊಳಿಸದಿದ್ದಲ್ಲಿ ಜ.9 ರಂದು ವಿವಿಧ ಸಂಘಟನೆಯ ಜತೆಗೂಡಿ ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕಿನ ಭೈರನತ್ತ ಗ್ರಾಮದ ಆದಿಜಾಂಬವ ಸಮುದಾಯದ ಮುಖಂಡರು ಸೋಮವಾರ ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರಿಗೆ ತಿಳಿಸಿದರು.

ಈ ಸಂಬಂಧ ಗ್ರಾಮದಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ಸಮುದಾಯದ ಮುಖಂಡರು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಅವರನ್ನು ಭೇಟಿಯಾದರು. ಈ ವೇಳೆ ಗ್ರಾಮದ ಮುಖಂಡ ಮಾದೇವ ಮಾತನಾಡಿ, ಸರ್ವೇ ನಂ.75ರಲ್ಲಿ ಈ ಹಿಂದೆಯೇ ಸರ್ಕಾರದಿಂದ ಸಮುದಾಯಕ್ಕೆ ಸ್ಮಶಾನ ಮಂಜೂರು ಮಾಡಿದ್ದು, ಇಲ್ಲಿಗೆ ತೆರಳಲು ಪೂರ್ವಿಕರ ಕಾಲದಿಂದಲೂ ಮೂಲ ರಸ್ತೆ ಇದೆ. ಇದರಿಂದ ಶವ ಸಂಸ್ಕಾರ ನಡೆಸಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ 4 ತಿಂಗಳ ಹಿಂದೆ ಈ ಭಾಗದಲ್ಲಿನ ರೈತರೊಬ್ಬರೂ ರಸ್ತೆ ಹಾಗೂ ಹಳ್ಳವನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಸ್ಮಶಾನಕ್ಕೆ ತೆರಳಲು ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಅಲ್ಲದೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದ್ದು, ಈಗಾಗಲೇ ಸ್ಥಳಕ್ಕೆ ತಹಸೀಲ್ದಾರ್ ಅವರು 3 ಬಾರಿ ಆಗಮಿಸಿ ಸರ್ವೇ ಕಾರ್ಯ ನಡೆಸಿದಾಗ ಒತ್ತುವರಿ ಆಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಶಾಸಕರನ್ನು ಭೇಟಿಯಾದಾಗ ಉತ್ತಮ ಸ್ಪಂದನೆ ವ್ಯಕ್ತವಾಗಲಿಲ್ಲ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ಜ.8 ರಂದು ಸ್ಥಳಕ್ಕೆ ಆಗಮಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸುವುದರ ಮೂಲಕ ಸ್ಮಶಾನಕ್ಕೆ ತೆರಳಲು ಸಮುದಾಯಕ್ಕೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ವಿವಿಧ ಸಂಘಟನೆಯೊಂದಿಗೆ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಅವರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ತಾಲೂಕು ಸಂಚಾಲಕ ಮಹೇಶ್, ಪಪಂ ಮಾಜಿ ಸದಸ್ಯ ಸುದೇಶ್, ಗ್ರಾಪಂ ಮಾಜಿ ಸದಸ್ಯ ಮಾದೇವ, ಮುಖಂಡರಾದ ಶಂಭುಲಿಂಗ, ಬಸಪ್ಪ, ವೆಂಕಟೇಶ್, ಧರ್ಮೇಶ್, ದೊರೆಸ್ವಾಮಿ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net