ಕೋಲಾರದಲ್ಲಿ 485 ಎಕರೆ ಸರ್ಕಾರಿ ಭೂಮಿ ಕಬಳಿಕೆ

land encroachment
land encroachment
Published on

ಪ್ರಮುಖ ಮುಖ್ಯಾಂಶಗಳು

  • ₹ 768 ಕೋಟಿ ನಷ್ಟ ಲೋಕಾಯುಕ್ತ ತನಿಖೆ ಚುರುಕು
ಬೆಂಗಳೂರು: ಕೋಲಾರ ಮತ್ತು ಮಾಲೂರು ತಹಸೀಲ್ದಾರ್ ಕಚೇರಿ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ (ಎಡಿಎಲ್‌ಆರ್) ಕಚೇರಿಗಳಲ್ಲಿ ನಡೆದಿರುವ ಭೂ ದಾಖಲೆಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತವು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ತನಿಖೆಯಲ್ಲಿ ಸರ್ಕಾರಿ ಕಚೇರಿಗಳಿಂದ ನಾಪತ್ತೆಯಾಗಿದ್ದ ಮೂಲ ಕಂದಾಯ ದಾಖಲೆಗಳು ಖಾಸಗಿ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದು, ಅಂದಾಜು 485 ಎಕರೆ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ನಕಲಿ ಮಂಜೂರಾತಿ ದಾಖಲೆ ಸೃಷ್ಟಿಸಿ ರಾಜ್ಯ ಬೊಕ್ಕಸಕ್ಕೆ ಸುಮಾರು ಬರೊಬ್ಬರಿ ₹768 ಕೋಟಿ ನಷ್ಟ ಉಂಟುಮಾಡಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ ಲೋಕಾಯುಕ್ತದ ಕೋಲಾರ ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿಯ ಆಧಾರದ ಮೇಲೆ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಆದೇಶದಂತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ 6 ಸರ್ಕಾರಿ ಕಚೇರಿಗಳು ಹಾಗೂ ಕೆಲವು ಖಾಸಗಿ ಆವರಣಗಳಲ್ಲಿ ಶೋಧ ನಡೆಸಲು ವಾರಂಟ್‌ಗಳನ್ನು ಜಾರಿಗೊಳಿಸಲಾಯಿತು.

435 ದಾಖಲೆಗಳ ವಶ

ಶೋಧ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಒಟ್ಟು 435 ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ 128 ಮೂಲ ಸರ್ಕಾರಿ ದಾಖಲೆಗಳು ಸೇರಿವೆ. ಇವುಗಳಲ್ಲಿ ಮಂಜೂರಾತಿ (ಗ್ರಾಂಟ್) ರಿಜಿಸ್ಟರ್‌ಗಳು, ಪಟ್ಟಾ ಪುಸ್ತಕಗಳು, ಖಾತೆ ರಿಜಿಸ್ಟರ್, ಫೋಡಿ ದಾಖಲೆಗಳು ಹಾಗೂ ಗ್ರಾಮ ನಕ್ಷೆಗಳು ಸೇರಿ ಹಲವು ಮಹತ್ವದ ಕಂದಾಯ ದಾಖಲೆಗಳಿವೆ. ಕಂದಾಯ ಅಧಿಕಾರಿಗಳ ಅಧಿಕೃತ ರುಜುವಾತು ಹಾಗೂ ನಗದು ಹಣ ಕೂಡ ಪತ್ತೆಯಾಗಿತ್ತು.
ಮೂಲ ದಾಖಲೆಗಳನ್ನು ಸರ್ಕಾರಿ ಕಚೇರಿಗಳಿಂದ ಅಕ್ರಮವಾಗಿ ಹೊಗೆ ತಂದು, ಖಾಸಗಿ ಫಾರ್ಮ್ ಹೌಸ್‌ನಲ್ಲಿ ಇಡಲಾಗಿತ್ತು. ಅವುಗಳನ್ನು ಬಳಸಿಕೊಂಡು ನಕಲಿ ಮಂಜೂರಾತಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿತ್ತು.

ಕಂದಾಯ ಅಧಿಕಾರಿಗಳ ವಿಶೇಷ ತಂಡ

ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆಗೆ ಕಂದಾಯ ಆಡಳಿತದ ಕಂದಾಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಗಿತ್ತು. ಈ ತಂಡದ ನೆರವಿನಿಂದ ದಾಖಲೆಗಳ ಪರಿಶೀಲನೆ ನಡೆಸಿ ತನಿಖಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಪರಿಶೀಲನಾ ಅಧಿಕಾರಿಗಳು ಲಭ್ಯವಿರುವ ದಾಖಲೆಗಳನ್ನು ಪರಿಶೀಲನೆ ಹಾಗೂ 435 ದಾಖಲೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ತಿದ್ದುಪಡಿ, ನಕಲು ಮತ್ತು ಇತರ ಅಕ್ರಮಗಳ ಪ್ರಮಾಣವನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಪರಿಶೀಲನಾ ಟಿಪ್ಪಣಿ ಸಲ್ಲಿಸಿದ್ದಾರೆ.

ಡಿಸಿ ವರದಿ ಸಲ್ಲಿಸದ ಬಗ್ಗೆ ಅಸಮಾಧಾನ

ಪ್ರಕರಣದ ವಿಚಾರಣೆಗೆ ಲೋಕಾಯುಕ್ತರು, ಕೋಲಾರ ಜಿಲ್ಲಾಧಿಕಾರಿ, ತಹಸೀಲ್ದಾರರು ಹಾಗೂ ಎಡಿಎಲ್‌ಆರ್ ಅಧಿಕಾರಿಗಳನ್ನು ಲೋಕಾಯುಕ್ತರ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಸರ್ಕಾರಿ ದಾಖಲೆಗಳು ಹೇಗೆ ನಾಪತ್ತೆಯಾದವು, ಅದಕ್ಕೆ ಕಾರಣರಾದ ಅಧಿಕಾರಿಗಳು ಯಾರು ಹಾಗೂ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ವರದಿ ಸಲ್ಲಿಸದಿರುವುದನ್ನು ಲೋಕಾಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಖಾಸಗಿ ಫಾರ್ಮ್‌ಹೌಸ್‌ನಲ್ಲಿ ಮೂಲ ಸರ್ಕಾರಿ ದಾಖಲೆಗಳು ಪತ್ತೆಯಾಗಿರುವುದು ಜಿಲ್ಲಾ ಆಡಳಿತದ ಗಂಭೀರ ವೈಫಲ್ಯ ಎಂಬುದಾಗಿ ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ 21ಕ್ಕೆ ವಿಚಾರಣೆ
ಸರ್ಕಾರಿ ಭೂ ದಾಖಲೆಗಳ ಭದ್ರತೆ ಮತ್ತು ರಾಜ್ಯ ಬೊಕ್ಕಸಕ್ಕೆ ಉಂಟಾಗಿರುವ ಎನ್ನಲಾದ ಭಾರಿ ನಷ್ಟವನ್ನು ಗಮನದಲ್ಲಿಟ್ಟುಕೊಂಡು, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ 2026ರ ಆಗಸ್ಟ್ 21ರಂದು ಮಧ್ಯಾಹ್ನ 3.30ಕ್ಕೆ ಪ್ರಾಥಮಿಕ ವಿಚಾರಣೆಯನ್ನು ನಡೆಸಲು ಲೋಕಾಯುಕ್ತರು ಆದೇಶಿಸಿದ್ದಾರೆ.
-----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net