ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆ ಒತ್ತು

ತಿ.ನರಸೀಪುರ ಪಟ್ಟಣದ ವಿವೇಕಾನಂದ ನಗರದಲ್ಲಿರುವ ಸಭಾಭವನದಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕುಂಬ್ರಹಳ್ಳಿ ಸುಬ್ಬಣ್ಣ, ಡಾ.ಎಂ.ರೇವಣ್ಣ, ಆರ್. ಶಿವಕುಮಾರ್, ದಯಾನಂದ ಪಟೇಲ್ ಎನ್.ಎಂ.ರಾಮಚಂದ್ರ, ಕೆ.ಮಹದೇವಶೆಟ್ಟಿ, ಹಿರಿಯೂರು ಶಿವಕುಮಾರ್, ಸಿ.ಎಂ.ಪ್ರಕಾಶ್, ರಘು ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ವಿವೇಕಾನಂದ ನಗರದಲ್ಲಿರುವ ಸಭಾಭವನದಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕುಂಬ್ರಹಳ್ಳಿ ಸುಬ್ಬಣ್ಣ, ಡಾ.ಎಂ.ರೇವಣ್ಣ, ಆರ್. ಶಿವಕುಮಾರ್, ದಯಾನಂದ ಪಟೇಲ್ ಎನ್.ಎಂ.ರಾಮಚಂದ್ರ, ಕೆ.ಮಹದೇವಶೆಟ್ಟಿ, ಹಿರಿಯೂರು ಶಿವಕುಮಾರ್, ಸಿ.ಎಂ.ಪ್ರಕಾಶ್, ರಘು ಇತರರು ಇದ್ದರು.
Published on

ತಿ.ನರಸೀಪುರ:

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದಲ್ಲಿ ಯುವಶಕ್ತಿ ಜಾಗೃತಗೊಳ್ಳುತ್ತಿದ್ದು, ಬಿಜೆಪಿ ಸಂಘಟನೆ ಬಲಪಡಿಸಲು ಯುವಮೋರ್ಚಾ ಅತ್ಯಂತ ಜವಾಬ್ದಾರಿಯುತ ಹಾಗೂ ಪ್ರಮುಖ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಹೇಳಿದರು.


ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾದ ಸಭಾ ಭವನದಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷದಿಂದ ಆಯೋಜಿಸಿದ್ದ ತಿ.ನರಸಿಪುರ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪಕ್ಷದ ನಿಷ್ಠಾವಂತರನ್ನು ಸನ್ಮಾನಿಸಿ ಮಾತನಾಡಿದರು.


ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಯುವ ಪೀಳಿಗೆಯನ್ನು ಹಾಗೂ ಪಕ್ಷದ ಶಕ್ತಿಯನ್ನು ಒಟ್ಟುಗೂಡಿಸಿ ಸಂಘಟನೆ ಬಲಪಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಕರೆ ನೀಡಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯವಾಕ್ಯ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಯುವಮೋರ್ಚಾ ಕಾರ್ಯಕರ್ತರ ಶ್ರಮ ಅತ್ಯಗತ್ಯ. ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗಾಗಿ ವೈದ್ಯಕೀಯ ವೃತ್ತಿ ಹಾಗೂ ಸರ್ಕಾರಿ ಸೇವೆಯನ್ನು ಬಿಟ್ಟು ಜನಸೇವೆಗೆ ಬಂದ ಡಾ.ಎಂ.ರೇವಣ್ಣ ಅವರ ಮಾರ್ಗದರ್ಶನ ಹಾಗೂ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ನರಸೀಪುರದಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕಿದೆ ಎಂದರು.

ಪಕ್ಷದ ಅಭ್ಯರ್ಥಿ ಸ್ಪರ್ಧೆ:

ರಾಜ್ಯದಲ್ಲಿ ಜೆಡಿಎಸ್ ಜತೆ ಬಿಜೆಪಿ ಮೈತ್ರಿಯಿದ್ದರೂ ಹಾಗೂ ಹಲವು ಊಹಾಪೋಹಗಳಿದ್ದರೂ ಕೂಡ ಮುಂಬರುವ ಚುನಾವಣೆಯಲ್ಲಿ ಟಿ.ನರಸೀಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದ್ದೇವೆ. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಕುಂಬ್ರಹಳ್ಳಿ ಸುಬ್ಬಣ್ಣ ಸ್ಪಷ್ಟಪಡಿಸಿದರು.


ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಂಪುಟ ರಚನೆ ಮತ್ತು ದೆಹಲಿ ಪ್ರವಾಸದಲ್ಲೇ ಮುಖ್ಯಮಂತ್ರಿಗಳು ಕಾಲ ಕಳೆಯುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಕುಡಿಯುವ ನೀರು ಹಾಗೂ ದನಕರುಗಳಿಗೆ ಮೇವಿನ ಅಭಾವ ಎದುರಾಗಿದೆ. ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದು ಹರಿಹಾಯ್ದರು.


ವಿಜಯೇಂದ್ರ ನೇತೃತ್ವದಲ್ಲಿ ಸಂಘಟನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಚುರುಕಿನಿಂದ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಟಿ.ನರಸೀಪುರ ಕ್ಷೇತ್ರದಿಂದಲೇ ಗೆಲುವಿನ ಘೋಷಣೆ ಮೊಳಗಿಸಬೇಕಿದೆ. ಇದಕ್ಕಾಗಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಯೊಂದು ಬೂತ್ ಮಟ್ಟದಲ್ಲಿ, ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರಗಳ ಮಟ್ಟದಲ್ಲಿ ಬೂತ್ ಸಮಿತಿಗಳನ್ನು ರಚಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಕುಂಬ್ರಹಳ್ಳಿ ಸುಬ್ಬಣ್ಣ ಹೇಳಿದರು.


ಮುಖಂಡ ಡಾ.ಎಂ.ರೇವಣ್ಣ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧ್ಯೇಯ ವಾಕ್ಯದಂತೆ ನಮಗೆ ದೇಶವೇ ಮೊದಲು. ದೇಶದ ಶಕ್ತಿಯೇ ಯುವಶಕ್ತಿಯಾಗಿದೆ. ಮೋದಿ ಅವರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ವೃದ್ಧಿಯಾಗಿದೆ. ಯುವ ಮೋರ್ಚಾದ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಪಕ್ಷವನ್ನು ಬಲಪಡಿಸಬೇಕು. ಕೇಂದ್ರದಲ್ಲಿನ ವಿಪಕ್ಷಗಳು ಶಾಲಾ-ಕಾಲೇಜು ಮಟ್ಟದಲ್ಲಿ ಯುವಕರನ್ನು ತಪ್ಪು ದಾರಿಗೆ ಎಳೆಯಲು ಷಡ್ಯಂತ್ರ ನಡೆಸುತ್ತಿವೆ. ಯುವ ಮೋರ್ಚಾ ಕಾರ್ಯಕರ್ತರು ಪ್ರತಿಯೊಂದು ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ ಹಾಗೂ ಹೋಬಳಿ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.


ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ದಯಾನಂದ ಪಟೇಲ್ ಮಾತನಾಡಿದರು. ಯುವ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ಹೆಸರಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಹಲವು ಮುಖಂಡರು ರಕ್ತದಾನ ಮಾಡಿದರು.


ಆರೋಗ್ಯ ಭಾರತಿ ಹಾಗೂ ಮೈಸೂರಿನ ಸ್ಪಂದನ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪಕ್ಷದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿದ ನಿಷ್ಠಾವಂತರನ್ನು ಸನ್ಮಾನಿಸಲಾಯಿತು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು.


ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಕೆ.ಮಹದೇವ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ್ ಪಾರ್ಥ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಬ್ಬೆಹುಂಡಿ ಶಿವಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಹಿರಿಯೂರು ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಟಿ.ಎಸ್. ಮಲ್ಲಿಕಾರ್ಜುನ ಸ್ವಾಮಿ, ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಉಪಾಧ್ಯಕ್ಷ ಎಸ್.ಕೆ.ಕಿರಣ್, ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಪಿ. ಕುಮಾರ್, ಮುಖಂಡರಾದ ಕರೋಹಟ್ಟಿ ಬಸವರಾಜು, ಕೆ.ವಿ.ಶಿವಶಂಕರ್, ಬಿ.ಎಂ.ವಿಜಯಕುಮಾರ್, ಕೆ.ಎಂ.ಮಂಜುನಾಥ್, ಬಲ್ಲಯ್ಯ, ರಾಜಶೇಖರ್, ಸೋಮಶೇಖರಪ್ಪ, ಬಿ.ಪಿ.ಪರಶಿವಮೂರ್ತಿ ಇತರರು ಇದ್ದರು.

ನೇಮಕಾತಿ ಪತ್ರ ವಿತರಣೆ

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಘು ಸೇರಿದಂತೆ ನೂತನ ಉಪಾಧ್ಯಕ್ಷರಾಗಿ ಮನು, ಎಂ.ಶ್ರೀನಿವಾಸ್ ಪ್ರಸಾದ್, ಎಸ್. ಜೆ. ಪ್ರಜ್ವಲ್, ರಾಚಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಆರ್.ಎನ್.ನಾಗೇಂದ್ರ ಮೂರ್ತಿ(ರಾಜೇಶ್), ಕೆ.ಎಂ.ವರುಣ್, ಎಸ್.ವಿ.ರಾಜೇಂದ್ರ ಪ್ರಸಾದ್(ಮನು), ಕಾರ್ಯದರ್ಶಿಗಳಾಗಿ ನಿತಿನ್, ಶಾಂತರಾಜು, ಮುರುಡೇಶ, ಮಹೇಶ ಕಳ್ಳಿಪುರ, ಕೋಶಾಧ್ಯಕ್ಷರಾಗಿ ಬಿ.ಎನ್.ಮಂಜು, ಕಾರ್ಯಕಾರಿ ಸದಸ್ಯರಾಗಿ ವಿ. ವೆಂಕಟೇಶ್, ಎಂ.ಪಿ.ಮಹದೇವಸ್ವಾಮಿ, ಪುಟ್ಟಸ್ವಾಮಿ ಹೊಸಕೊಪ್ಪಲು, ಅಭಿಲಾಶ್, ಶ್ರೀಕಾಂತ್, ಚಂದು, ರಾಜು ಕುರುಬೂರು ಅವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರಗಳನ್ನ ಗಣ್ಯರು ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net