ವಿದ್ಯುತ್ ಮಾಲೀಕತ್ವ ವರ್ಗಾವಣೆ ಈಗಿನ್ನೂ ಸುಲಭ: ಹೆಸರಿನ ಬದಲಾವಣೆ ಪ್ರಕ್ರಿಯೆ ಹೇಗೆ? ಇಲ್ಲಿದೆ ನೋಡಿ ಪೂರ್ಣ ವಿವರ

ವಿದ್ಯುತ್ ಮಾಲೀಕತ್ವ ವರ್ಗಾವಣೆ
ವಿದ್ಯುತ್ ಮಾಲೀಕತ್ವ ವರ್ಗಾವಣೆ
Published on

ಪ್ರಮುಖ ಮುಖ್ಯಾಂಶಗಳು

  • ಇ-ಖಾತಾ ಡೇಟಾ ಬಳಸಿ ಸ್ವಯಂಚಾಲಿತ ಮಾಹಿತಿ ಪರಿಶೀಲನೆ
  • ಕೇವಲ 1,300 ರೂ. ಒಳಗೆ ಸಂಪೂರ್ಣ ಪ್ರಕ್ರಿಯೆ
  • ಈಗಾಗಲೇ 5,000ಕ್ಕೂ ಹೆಚ್ಚು ಜನರಿಂದ ಬಳಕೆ
  • ಬೆಸ್ಕಾಂ ಪೋರ್ಟಲ್ ಜಿಬಿ ಡೇಟಾಬೇಸ್ ಜತೆ ಏಕೀಕರಣ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜಾರಿಯಾಗಿರುವ ಇ-ಖಾತಾ ಅಭಿಯಾನಕ್ಕೆ ಇದೀಗ ದೊಡ್ಡ ಬೆಂಬಲ ಸಿಕ್ಕಿದೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ತನ್ನ ಪೋರ್ಟಲ್ ಅನ್ನು ಜಿಬಿಎ ಡೇಟಾಬೇಸ್ ಜತೆ ಏಕೀಕರಿಸಿ, ವಿದ್ಯುತ್‌ ಸಂಪರ್ಕವನ್ನು ಮಾಲೀಕರ ಹೆಸರಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಇದರಿಂದ ಮನೆ ಅಥವಾ ಆಸ್ತಿ ಮಾಲೀಕರು 10 ನಿಮಿಷಗಳೊಳಗೆ ಆನ್‌ಲೈನ್ ಮೂಲಕ ಹೆಸರಿನ ಬದಲಾವಣೆ ಪೂರ್ಣಗೊಳಿಸಬಹುದು. ಹೊಸ ವ್ಯವಸ್ಥೆಯಿಂದ ಮನೆ ಮಾಲೀಕರು ಎಲ್ಲಿದ್ದರೂ, ಯಾವಾಗ ವಿದ್ಯುತ್ ಬೇಕಾದರೂ ಸಂಪರ್ಕದ ಹೆಸರನ್ನು ಬದಲಾಯಿಸಿಕೊಳ್ಳಬಹುದು. ಡಿಜಿಟಲ್ ಇಂಡಿಯಾ ದಿಶೆಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. 

ಹೇಗೆ ಕಾರ್ಯನಿರ್ವಹಿಸುತ್ತದೆ?

ಇ-ಖಾತಾ ವ್ಯವಸ್ಥೆಯಲ್ಲಿ ಆಸ್ತಿ ಸಂಖ್ಯೆ, ಗ್ರಾಹಕ ಐಡಿ, ಆಧಾರ್, ಮೊಬೈಲ್‌ ಸಂಖ್ಯೆ ಮತ್ತು ಇ-ಮೇಲ್ ಐಡಿ ಮೊದಲಾದ ಮಾಹಿತಿಗಳನ್ನು ದೃಢೀಕರಿಸಲಾಗುತ್ತದೆ. ಇದೇ ಪ್ರಮಾಣೀಕೃತ ಮಾಹಿತಿಯನ್ನು ಬಳಸಿಕೊಂಡು, ಬೆಸ್ಕಾಂ ಈಗ ಕಟ್ಟಡ ನಿರ್ಮಾಪಕರಿಂದ ಖರೀದಿದಾರರಿಗೆ ಅಥವಾ ಹಳೆಯ ಮಾಲೀಕರಿಂದ ಹೊಸ ಮಾಲೀಕರಿಗೆ ವಿದ್ಯುತ್ ಸಂಪರ್ಕವನ್ನು ಸುಲಭವಾಗಿ ವರ್ಗಾಯಿಸಬಹುದು.

ಸಮಸ್ಯೆಗೆ ಸ್ಮಾರ್ಟ್‌ ಪರಿಹಾರ

ಹಿಂದೆ 

  • ಅನೇಕ ದಾಖಲೆ ಸಲ್ಲಿಕೆ
  • ವಾರಗಟ್ಟಲೆ ಕಚೇರಿಗಳ ಸುತ್ತಾಟ 
  • ಮಧ್ಯವರ್ತಿಗಳಿಗೆ 10,000 ರೂ.ಗೂ ಹೆಚ್ಚು ಹಣ

ಈಗ

  • ಸಂಪೂರ್ಣ ಫೇಸ್‌ಲೆಸ್​ ಮತ್ತು ಪಾರದರ್ಶಕ ವ್ಯವಸ್ಥೆ 
  • ಮಾನವ ಹಸ್ತಕ್ಷೇಪವಿಲ್ಲ  
  • ಸರಳ, ವೇಗದ ಸೇವೆ

ಸರಳ ಪ್ರಕ್ರಿಯೆ

ಇ-ಖಾತಾ ಸಿಕ್ಕ ತಕ್ಷಣವೇ ಮಾಲೀಕರಿಗೆ ಎಸ್‌ಎಂಎಸ್ ಮೂಲಕ ಲಿಂಕ್ ಬರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿದರೆ ಒಟಿಪಿ ಪರಿಶೀಲನೆ ನಂತರ ಎಲ್ಲ ಖಾತಾ ವಿವರಗಳು ತೋರಿಸುತ್ತವೆ. ಬಳಿಕ ಇ-ಸೈನ್ ಮೂಲಕ ಡಿಜಿಟಲ್ ಸ್ಟ್ಯಾಂಪ್ ಪೇಪರ್, ಬಾಂಡ್‌ಗೆ ಸಹಿ ಮಾಡಿ, ಶುಲ್ಕ ಪಾವತಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ತಿಳಿಸಿದ್ದಾರೆ.

ಹೆಸರಿನ ಬದಲಾವಣೆ ಪ್ರಕ್ರಿಯೆ ಹೇಗೆ?

  • ಇ-ಖಾತಾ ಪೂರ್ಣಗೊಂಡ ಬಳಿಕ ಎಸ್‌ಎಂಎಸ್ ಮೂಲಕ ಲಿಂಕ್ ಬರುತದೆ
  • ಲಿಂಕ್ ಕ್ಲಿಕ್ ಮಾಡಿ ಬೆಸ್ಕಾಂ ಪೋರ್ಟಲ್‌ಗೆ ಲಾಗಿನ್ ಆಗಿ
  • ಒಟಿಪಿ ಮೂಲಕ ದೃಢೀಕರಣ
  • ಜಿಬಿಎಯಿಂದ ಪಡೆದ ಆಸ್ತಿ ವಿವರ ಪರಿಶೀಲನೆ
  • 100 ರೂ. ಪ್ರೊಸೆಸಿಂಗ್ ಶುಲ್ಕ ಪಾವತಿ
  • ಇ-ಸೈನ್ ಲಿಂಕ್ ಕ್ಲಿಕ್ ಮಾಡಿ ಡಿಜಿಟಲ್ ಒಪ್ಪಂದ ಓದಿ
  • 1,194 ರೂ. ಶುಲ್ಕವನ್ನು ಯುಪಿಐ, ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ಸಹಿ ದೃಢೀಕರಣ
  • ದಾಖಲೆಗಳನ್ನು ಡೌನ್‌ಲೋಡ್ ಮಾಡಿ ದೃಢೀಕರಣ ಎಸ್‌ಎಂಎಸ್ ಸ್ವೀಕರಿಸಿ
  • ಮುಂದಿನ ಬಿಲ್ಲಿಂಗ್‌ನಲ್ಲಿ ಹೊಸ ಹೆಸರು ಗೋಚರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net