ಆಹಾರ ಸುರಕ್ಷತೆ, ನೈರ್ಮಲ್ಯ ಇಲ್ಲದಿದ್ದರೆ ಕಾನೂನು ಕ್ರಮ

Health Department Food Safety Department
Health Department Food Safety Department
Published on

ಪ್ರಮುಖ ಮುಖ್ಯಾಂಶಗಳು

  • - ಹೋಟೆಲ್, ಡಾಬಾ ಸೇರಿ ಆಹಾರ ಸಂಸ್ಥೆಗಳಿಗೆ ಮಾರ್ಗಸೂಚಿ ಬಿಡುಗಡೆ
  • - ಆಹಾರ ಸುರಕ್ಷತೆ ಇಲಾಖೆಯಿಂದ ಕಟ್ಟುನಿಟ್ಟಿನ ನಿಯಮ

ಬೆಂಗಳೂರು:

ತಾರಾ ಹೋಟೆಲ್‌ಗಳು ಸೇರಿ ಆಹಾರ ತಯಾರಿಕೆ ಹಾಗೂ ದಾಸ್ತಾನು ಘಟಕಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ಕಳಪೆ ನೈರ್ಮಲ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸುರಕ್ಷತೆ ಇಲಾಖೆ, ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ಸಂಬಂಧ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದ ಎಲ್ಲ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳ ಆವರಣದ ಪ್ರಮುಖ ಸ್ಥಳದಲ್ಲಿ ಆಹಾರ ವ್ಯವಹಾರದ ಪರವಾನಗಿಯನ್ನು ಗೋಚರಿಸುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಆಹಾರ ವ್ಯವಹಾರದ ಪ್ರಕ್ರಿಯೆಗಳಲ್ಲಿ ಯಾವುದೇ ಬದಲಾವಣೆ ಆದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಆಡುಗೆ ಮಾಡುವ ಸ್ಥಳವನ್ನು ಸದಾ ಸ್ವಚ್ಛ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿ ಬೆಳಕು ಇರುವಂತೆ ನಿರ್ವಹಿಸಬೇಕು. ಪಾತ್ರೆ, ಉಪಕರಣಗಳು ಹಾಗೂ ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯಲು ಪ್ರತ್ಯೇಕ ಸಿಂಕ್‌ಗಳ ವ್ಯವಸ್ಥೆ ಮಾಡಬೇಕು. ಆಡುಗೆ ತಯಾರಿಸಲು ಹಾಗೂ ಆಹಾರ ವಿತರಿಸಲು ಬಳಸುವ ಉಪಕರಣಗಳು, ಪಾತ್ರೆಗಳು ಎಲ್ಲವನ್ನು ಡಿಟರ್ಜೆಂಟ್ ಮತ್ತು ಬಿಸಿನೀರು ಬಳಸಿ ತೊಳೆಯಬೇಕು ಎಂದು ತಿಳಿಸಲಾಗಿದೆ.
ಅಡುಗೆಗೆ ಬಳಸುವ ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದ್ದು, ವಿಶ್ವಾಸಾರ್ಹ ಮೂಲದಿಂದ ಖರೀದಿಸಬೇಕು. ನಂತರ ಅವುಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಪರಿಸ್ಥಿತಿಯಲ್ಲಿ ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ ಹಾಳಾಗದಂತೆ ನಿರಂತರವಾಗಿ ಗುಣಮಟ್ಟ ಪರಿಶೀಲಿಸಬೇಕು. ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿ ಸಂಗ್ರಹಿಸಬೇಕು. ಆಗತ್ಯ ಇರುವಲ್ಲಿ ಆಹಾರ ಉತ್ಪನ್ನಗಳಲ್ಲಿ ರಾಸಾಯನಿಕ ಹಾಗೂ ಸೂಕ್ಷ್ಮಜೀವಿ ಮಾಲಿನ್ಯಗಳ ಪರೀಕ್ಷೆಯನ್ನು ಖಚಿತಪಡಿಸಬೇಕು ಎಂದು ತಿಳಿಸಲಾಗಿದೆ.
ಎಫ್ಎಸ್‌ಎಸ್‌ಎಐ ನಿಯಮಗಳನ್ವಯ ತಯಾರಿಕೆ ಮತ್ತು ವಿತರಣೆ ಸೇರಿ ಆಹಾರ ನಿರ್ವಹಿಸುವ ಸಿಬ್ಬಂದಿ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸ್ವಚ್ಛ ಸಮವಸ, ತಲೆಕವಚ, ಮಾಸ್ಕ್, ಏಪ್ರಾನ್ ಕಡ್ಡಾಯ ಧರಿಸಬೇಕು. ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಿಬ್ಬಂದಿಗೆ ವಾರ್ಷಿಕ ವೈದ್ಯಕೀಯ ಆರೋಗ್ಯ/ಫಿಟ್ನೆಸ್ ದಾಖಲೆಗಳನ್ನು ನವೀಕರಿಸಿ ನಿರ್ವಹಿಸಬೇಕು. ಇವುಗಳ ಮೇಲ್ವಿಚಾರಣೆಗೆ ಆಹಾರ ಸುರಕ್ಷತೆ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಹಾಗೆಯೇ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಳಸುವ ಶೌಚಗೃಹವನ್ನು ಸ್ವಚ್ಚವಾಗಿಡಬೇಕು. ಕೈತೊಳೆಯಲು ಸಾಬೂನು ವ್ಯವಸ್ಥೆ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಆಹಾರ ಸಾಗಣೆ ಮತ್ತು ನಿರ್ವಹಣೆ

ಆಹಾರ ಸಾಗಿಸುವ ವಾಹನ ಸ್ವಚ್ಛ ಮತ್ತು ನೈರ್ಮಲ್ಯಯುತವಾಗಿರಬೇಕು. ಆಹಾರ ಉತ್ಪನ್ನ ಸಾಗಣೆ ವಾಹನಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರವೇ ಬಳಸಬೇಕು. ಸಾಗಣೆ ವೇಳೆ ಆಹಾರವನ್ನು ಸೂಕ್ತ ತಾಪಮಾನದೊಂದಿಗೆ ಅಗತ್ಯ ಸೂಕ್ತ ಪ್ರಮಾಣದಲ್ಲಿ ತಲುಪಿಸಬೇಕು. ಬಾಟಲಿ ಪಾನೀಯ, ಸ್ಟೆರಿಲೈಸ್ ಮಾಡಿದ ಹಾಲು, ಕ್ಯಾನ್ ಅಹಾರ ಮುಂತಾದ ಪ್ಯಾಕೇಜ್ ಮಾಡಿದ ಆಹಾರಗಳನ್ನು ಹಾನಿಯಾಗದಂತೆ ಸಾಗಿಸಬೇಕು.

ಅಡುಗೆ ಮನೆ ನಿರ್ವಹಣೆ

ಅಡುಗೆ ಮನೆ ಗೋಡೆಗಳು, ನೆಲ ಮತ್ತು ಮೇಲ್ಛಾವಣಿ ಸ್ವಚ್ಛವಾಗಿ ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕು. ಧೂಳು, ನೊಣ, ಸೊಳ್ಳೆ ಪ್ರವೇಶಿಸದಂತೆ ಜಾಲರಿ ಅಥವಾ ಮೆಶ್ ಅಳವಡಿಸಬೇಕು. ಗೋಡೆ ಬಿರುಕು, ಜೇಡ, ನೇತಾಡುವ ವಿದ್ಯುತ್ ತಂತಿ ಸೇರಿ ಅಪಾಯ ಪರಿಸ್ಥಿತಿಗಳು ಎದುರಾಗದಂತೆ ಕ್ರಮ ವಹಿಸಬೇಕು. ಅಡುಗೆ ತಯಾರಿಕರು ಹಾಗೂ ವಿತರಕರಿಗೆ ಸಾಬೂನುಸಹಿತ ಪ್ರತ್ಯೇಕ ಕೈ ತೊಳೆಯುವ ಸಿಂಕ್‌ಗಳ ವ್ಯವಸ್ಥೆ, ಸೂಕ್ಷ್ಮಾಣುಗಳು ಹರಡದಂತೆ ಕಸದ ಬುಟ್ಟಿ ಸಮರ್ಪಕ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ತಿಳಿಸಿದ್ದಾರೆ.

ಆಹಾರ ತಯಾರಿಕೆಗೆ ನಿಯಮಗಳೇನು?

* ತಾಜಾ ಪದಾರ್ಥಗಳನ್ನೇ ಬಳಸಿ ಆಹಾರವನ್ನು ಚೆನ್ನಾಗಿ ಬೇಯಿಸಿ ತಯಾರಿಸಬೇಕು.
* ಸಸ್ಯಾಹಾರ ಮತ್ತು ಮಾಂಸಾಹಾರದ ತಯಾರಿಕೆ ಮತ್ತು ನಿರ್ವಹಣೆ ಪ್ರತ್ಯೇಕವಾಗಿರಬೇಕು.
* ಕೃತಕ ಬಣ್ಣ ಬಳಕೆ, ಅಡುಗೆ ಎಣ್ಣೆ ಮರುಬಳಕೆ ಮಾಡಬಾರದು.
* ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು.
* ತಣ್ಣನೆ ಆಹಾರವನ್ನು 5 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿಡಬೇಕು.
* ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಇಡಬೇಕು.
* ಪ್ರೋಜನ್ ಆಹಾರ ಪದಾರ್ಥಗಳನ್ನು 18 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕು.
* ಮಾಂಸ ಹಾಳಾದರೆ, ಹಣ್ಣು, ತರಕಾರಿಗಳಲ್ಲಿ ಶಿಲೀಂಧ್ರ ಕಾಣಿಸಿಕೊಂಡರೆ ಕೂಡಲೇ ವಿಲೇವಾರಿ ಮಾಡಬೇಕು.
* ಆಡುಗೆ ತಯಾರಿಕೆ, ಆಹಾರ ಪದಾರ್ಥಗಳು ಮತ್ತು ಪಾತ್ರೆ ಸ್ವಚ್ಛತೆಗೆ ಶುದ್ಧ ನೀರು ಬಳಸಬೇಕು.
* ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು.
* ಕುಡಿಯಲು ಉಚಿತ ಹಾಗೂ ಕಡ್ಡಾಯವಾಗಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net