ಶಿಗ್ಗಾಂವ್‌ನ ಜಾನಪದ ವಿವಿಗೆ ಅನುದಾನ ತರಲು ಪ್ರಯತ್ನ-fund

MP Jagadish Shettar
MP Jagadish Shettar
Published on
ಬೆಂಗಳೂರು: ಶಿಗ್ಗಾಂವ್‌ನ ಜಾನಪದ ವಿಶ್ವವಿದ್ಯಾಲಯಕ್ಕೆ ಅನುದಾನ ಮಂಜೂರಾತಿಗೆ ಪ್ರಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಆನಂದರಾವ್ ವೃತ್ತದ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂಗಮೇಶ ಬಾದವಾಡಗಿ ಅಭಿನಂದನೆ ಹಾಗೂ ‘ಸಂಗಮ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನುದಾನಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ, ಜಾನಪದ ವಿವಿಗೆ ಅನುದಾನ ತರಲು ಕ್ರಮವಹಿಸಲಾಗುವುದು. ಸಮಾಜಮುಖಿ ಕೆಲಸಗಾರರಾದ ಸಂಗಮೇಶ ಅವರು ಕ್ರಿಯಾಶೀಲ ವ್ಯಕ್ತಿ. ಜೀವನೋತ್ಸಾಹದ ಸಾಹಿತಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲು 371ಜೆ ಆರ್ಟಿಕಲ್ ತಂದಾಗ ಅವರು, ಜಿಲ್ಲೆ, ತಾಲೂಕು, ಗ್ರಾಮದ ಜನರಿಗೆ, ಯುವಜನರಿಗೆ ಅದರಿಂದ ಸಿಗುವ ಸವಲತ್ತುಗಳೇನು ಮತ್ತು ಅದನ್ನು ಹೇಗೆ ಬಳಸಿ ಅಭಿವೃದ್ಧಿಯತ್ತ ಸಾಗಬೇಕು ಎಂಬುದರ ಕುರಿತು ಪುಸ್ತಕ ಹೊರತರುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಜಾನಪದಕ್ಕೆ ಪ್ರತ್ಯೇಕ ವಿವಿಯಾಗಲು ಮುಖ್ಯ ಕಾರಣ ಗೊ.ರು. ಚನ್ನಬಸಪ್ಪ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಅವರು ನನ್ನನ್ನು ಭೇಟಿ ಮಾಡಿ, ಆ ವಿವಿಯ ಉನ್ನತಿಗೆ ಆದ್ಯತೆ ನೀಡುವಂತೆ ಕೇಳಿದ್ದರು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಸಮಾರಂಭದಲ್ಲಿ ಸಂಗಮೇಶ ಬಾದವಾಡಗಿ ದಂಪತಿಯನ್ನು ಅಭಿನಂದಿಸಲಾಯಿತು. ಬಳಗನೂರು ಚಿಕ್ಕೇನಕೊಪ್ಪ ಚನ್ನವೀರಮಠದ ಶಿವಶಾಂತವೀರ ಸ್ವಾಮೀಜಿ, ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ನಿವೃತ್ತ ಪೊಲೀಸ್ ಅಧಿಕಾರಿ ಡಾ.ಶಂಕರ ಬಿದರಿ, ಡಾ.ಸಿ. ಸೋಮಶೇಖರ್ ಮತ್ತಿತರರಿದ್ದರು.
ಸಮಾಜಸೇವಕರಿಗೆ ವಿನಮ್ರತೆ, ವಿಶಾಲತೆ ಮತ್ತು ವಿವೇಚನಾ ಗುಣಗಳಿರಬೇಕು. ಸಂಗಮೇಶ್‌ಗೆ ಈ ಗುಣಗಳಿದ್ದು, ವಿನಯಶೀಲರು. ಶಿಕ್ಷಣ, ಆಹಾರ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಕೃಷಿಯಲ್ಲಿನ ಕಷ್ಟ, ವ್ಯಾಪಾರದಲ್ಲಿ ನಷ್ಟ ಹಾಗೂ ರಾಜಕೀಯದಲ್ಲಿನ ಅನಿಷ್ಠ ಎಲ್ಲವನ್ನೂ ಅನುಭವಿಸಿದ್ದಾರೆ. ಅವರು ಎಲ್ಲೇ ಇದ್ದರೂ ಸಾಹಿತ್ಯವನ್ನು ಮಾತ್ರ ಬಿಟ್ಟಿಲ್ಲ. ವಿವಿಧ ಪ್ರಕಾರದ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಡಾ. ಗೊ.ರು. ಚನ್ನಬಸಪ್ಪ, ಹಿರಿಯ ಸಾಹಿತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net