ಹುಣಸೂರು: ಬಡತನ ಕಾರಣದಿಂದ ಯಾವ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆ ಹೋಬಳಿಯ ಮಾಚಬಾಯನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಮಾಚಬಾಯನಹಳ್ಳಿ ಗ್ರಾಮದ ನಿವಾಸಿ ನಿವೃತ್ತ ಅಧಿಕಾರಿ ಈರಪ್ಪನಾಯಕರ ಕುಟುಂಬವು ತಮ್ಮ ದಿ.ಪುತ್ರನ ಹುಟ್ಟುಹಬ್ಬದ ಸ್ಮರಣಾರ್ಥ ಶಾಲೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುವುದಲ್ಲದೆ, ದೇಶದ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ. ಸಮಾಜದಲ್ಲಿ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಅದಕ್ಕಾಗಿ ಸಮುದಾಯದ ಸಹಕಾರ ಅತ್ಯಗತ್ಯವಾಗಿದೆ. ಈರಪ್ಪನಾಯಕರ ಕುಟುಂಬದ ನಿಸ್ವಾರ್ಥ ಸೇವೆ ಸ್ತುತ್ಯಾರ್ಹ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ, ಹರವೆರಾಮೇನಹಳ್ಳಿ ರಾಜು, ಜಾಬಗೆರೆ ಆನಂದ, ಮುಖ್ಯಶಿಕ್ಷಕ ಸ್ವಾಮಿ, ಸಹಶಿಕ್ಷಕಿ ಕಮಲಾಕ್ಷಿ ಇತರರು ಇದ್ದರು.