

ನಂದಗುಡಿ :
ಸಾಮಾಜಿಕವಾಗಿ ಪ್ರಗತಿ ಹೊಂದಬೇಕಾದರೆ ಶಿಕ್ಷಣವೇ ಮೂಲಧಾರ. ಪಾಲಕರು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸದೃಢ ದೇಶ ನಿರ್ಮಿಸುವ ಶಿಲ್ಪಿಗಳನ್ನಾಗಿಸುವುದು ಶಿಕ್ಷಕರ ಜವಾಬ್ದಾರಿ ಎಂದು ಬಯೋಸ್ಟಾಡ್ಟ್ ಇಂಡಿಯಾ ಲಿಮಿಟೆಡ್ನ ಪ್ರಾದೇಶಿಕ ವ್ಯವಸ್ಥಾಪಕ ಸೋಮಶೇಖರ್ ಪಾಟೀಲ್ ಹೇಳಿದರು.
ನಂದಗುಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬಯೋಸ್ಟಾಡ್ಟ್ ಇಂಡಿಯಾ ಲಿಮಿಟೆಡ್ನ 40ನೇ ಬಯೋಜೈಮ್ ಡೇ ಪ್ರಯುಕ್ತ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣೆ ಹಾಗೂ ರೈತರಿಗೆ ಕಿಸಾನ್ ಸಮ್ಮಾನ್ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷದಂತೆ ಕಂಪನಿಯು ಗ್ರಾಮೀಣ ರೈತ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಗತ್ಯಗಳಿಗೆ ತಲಾ 3 ಸಾವಿರ ರೂ. ನೀಡುಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದರು.
ಉಪ ಪ್ರಾಂಶುಪಾಲ ಮುರುಳಿ ಮಾತನಾಡಿ, ಬಯೋಸ್ಟಾಡ್ಟ್ ಇಂಡಿಯಾ ಲಿಮಿಟೆಡ್ ಜೈವಿಕ ಉತ್ತೇಜಕಗಳು, ಬೆಳೆ ಉತ್ಪಾದನಾ ರಾಸಾಯನಿಕಗಳು ಹಾಗೂ ಸೂಕ್ಷ$್ಮ ಪೋಷಕಾಂಶಗಳ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿದ್ದು, ಬಯೋಜೈಮ್ 40 ವರ್ಷಗಳಿಂದ ರೈತರ ಸೇವೆ ಜತಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.
ನಂದಗುಡಿ ಪಬ್ಲಿಕ್ ಶಾಲೆ ಹಾಗೂ ಇಟ್ಟಸಂದ್ರ ಶ್ರೀವಿನಾಯಕ ಶಾಲೆಯ ಒಟ್ಟು 30 ರೈತ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಐವರು ಪ್ರಗತಿಪರ ರೈತರಿಗೆ ಕಿಸಾನ್ ಸಮ್ಮಾನ್ ಪುರಸ್ಕಾರ ನೀಡಲಾಯಿತು.