ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಕರ್ನಾಟಕ ಭೇಟಿಯು ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ 15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿರುವುದು ರಾಜ್ಯದ ಆರ್ಥಿಕ ಹಾಗೂ ಔದ್ಯೋಗಿಕ ಪ್ರಗತಿಗೆ ಹೊಸ ವೇಗ ನೀಡಿದೆ. ವಿಶೇಷವಾಗಿ, ಬೆಂಗಳೂರಿನ ಗುಲಾಬಿ ಮೆಟ್ರೋದ 7.5 ಕಿ.ಮೀ. ಎತ್ತರಿಸಿದ ಮಾರ್ಗಕ್ಕೆ ಚಾಲನೆ ನೀಡುವುದರೊಂದಿಗೆ ನಮ್ಮ ಮೆಟ್ರೋ ಜಾಲವು 100 ಕಿಲೋಮೀಟರ್ ಗಡಿಯನ್ನು (103 ಕಿ.ಮೀ.) ದಾಟಿದ್ದು, ನವಿ ಮುಂಬೈಯನ್ನು ಹಿಂದಿಕ್ಕಿ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ನಗರಕ್ಕೆ ಸುಗಮ ಸಾರಿಗೆ ವ್ಯವಸ್ಥೆಯೇ ಜೀವಾಳ. ಮೆಟ್ರೋ ಜಾಲದ ಈ ವಿಸ್ತರಣೆಯು ನಗರದ ಸಂಚಾರ ದಟ್ಟಣೆಯನ್ನು ತಗ್ಗಿಸುವುದರ ಜೊತೆಗೆ, ಸಾರ್ವಜನಿಕ ಸಾರಿಗೆಯನ್ನು ಬಳಸುವವರಿಗೆ ದೊಡ್ಡ ಮಟ್ಟದ ನಿರಾಳತೆ ನೀಡಲಿದೆ. ಇದರೊಂದಿಗೆ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಹಲವು ಮಹತ್ವದ ರೈಲ್ವೆ ಯೋಜನೆಗಳಿಗೂ ಚಾಲನೆ ದೊರೆತಿರುವುದು ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
ಈ ಇಡೀ ಬೆಳವಣಿಗೆಯಲ್ಲಿ ಗಮನಾರ್ಹವಾದ ಅಂಶವೆಂದರೆ ಸಹಕಾರಿ ಒಕ್ಕೂಟ ವ್ಯವಸ್ಥೆಯ ಯಶಸ್ಸು. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಸರ್ಕಾರಗಳಿದ್ದಾಗ ಸಾಮಾನ್ಯವಾಗಿ ಸಂಘರ್ಷ, ಆರೋಪ& ಪ್ರತ್ಯಾರೋಪಗಳು ಕಂಡುಬರುವುದು ಸಹಜ. ಆದರೆ, ಜನಹಿತ ಮತ್ತು ರಾಜ್ಯದ ಅಭಿವೃದ್ಧಿಯ ವಿಚಾರ ಬಂದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುವುದು ಪ್ರಜಾಪ್ರಭುತ್ವದ ಅತ್ಯಂತ ಆರೋಗ್ಯಕರ ಲಕ್ಷಣವಾಗಿದೆ. ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರದ ಅನುದಾನ, ತಾಂತ್ರಿಕ ನೆರವು ಮತ್ತು ಸಹಕಾರವನ್ನು ಪಡೆಯುವ ಜೊತೆಗೆ, ಭೂಸ್ವಾಧೀನ ಹಾಗೂ ರಾಜ್ಯದ ಪಾಲಿನ ಅನುದಾನದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿ ರಾಜಕಾರಣದ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನ್ನಣೆ ನೀಡುವುದರ ಮೂಲಕ ರಾಜಕೀಯ ಶಿಷ್ಟಾಚಾರದ ವಿಶಿಷ್ಟ ಮಾದರಿಯನ್ನು ಪರಿಚಯಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಈ ಸಮನ್ವಯವು ಕೇವಲ ವೇದಿಕೆಯ ಮೇಲಿನ ಸೌಹಾರ್ದತೆಗೆ ಸೀಮಿತವಾಗದೆ, ಯೋಜನೆಗಳ ಅನುಷ್ಠಾನದಲ್ಲೂ ಪ್ರತಿಫಲಿಸಿರುವುದು ಶ್ಲಾಘನೀಯ. ಆಡಳಿತಾರೂಢ ಪಕ್ಷಗಳು ಚುನಾವಣಾ ರಾಜಕಾರಣವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಿ, ಆಡಳಿತದ ಅವಧಿಯಲ್ಲಿ ಅಭಿವೃದ್ಧಿಯನ್ನೇ ಏಕೈಕ ಮಂತ್ರವಾಗಿಸಿಕೊಂಡರೆ ಎಂತಹ ಬೃಹತ್ ಸವಾಲುಗಳನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಕರ್ನಾಟಕದ ಈ ಯೋಜನೆಗಳು ಸಾಕ್ಷಿಯಾಗಿವೆ. ಇದು ದೇಶದ ಇತರ ರಾಜ್ಯಗಳಿಗೂ ಒಂದು ಉತ್ತಮ ಮಾದರಿಯಾಗಿದೆ. ರಾಜಕೀಯ ಮೇಲಾಟಗಳಿಗಿಂತ ರಾಜ್ಯದ ಹಿತವೇ ಮುಖ್ಯ ಎಂಬ ಈ ಸಹಕಾರದ ಸೂತ್ರವು ಮುಂದೆಯೂ ಇದೇ ರೀತಿ ಮುಂದುವರಿದರೆ, ಕರ್ನಾಟಕವು ದೇಶದ ಅಭಿವೃದ್ಧಿಯ ಮುಂಚೂಣಿಯಲ್ಲಿ ನಿಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ.