ಸಂಪಾದಕೀಯ: ಮಾನವೀಯತೆಯ ಅಧಃಪತನ

ನಾಗರಿಕ ಸಮಾಜವು ತಲೆತಗ್ಗಿಸುವಂತಹ ದಾರುಣ ಘಟನೆಯೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಗಳ ಅಂತಿಮ ಸಂಸ್ಕಾರ ಮುಗಿದ ಬಳಿಕ, ಆ ಕುಟುಂಬದವರಿಗೆ ಗೊತ್ತಾಗದಂತೆ ಮೃತದೇಹವನ್ನು ಹೊರತೆಗೆದು ವೈದ್ಯಕೀಯ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದ ಕರಾಳ ದಂಧೆಯು ಸಾಮಾನ್ಯ ಜನರನ್ನು ಬೆಚ್ಚಿಬೀಳಿಸುವಂತಿದೆ.
ಸಂಪಾದಕೀಯ: ಮಾನವೀಯತೆಯ ಅಧಃಪತನ
WEB
Published on: 

ನಾಗರಿಕ ಸಮಾಜವು ತಲೆತಗ್ಗಿಸುವಂತಹ ದಾರುಣ ಘಟನೆಯೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಗಳ ಅಂತಿಮ ಸಂಸ್ಕಾರ ಮುಗಿದ ಬಳಿಕ, ಆ ಕುಟುಂಬದವರಿಗೆ ಗೊತ್ತಾಗದಂತೆ ಮೃತದೇಹವನ್ನು ಹೊರತೆಗೆದು ವೈದ್ಯಕೀಯ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದ ಕರಾಳ ದಂಧೆಯು ಸಾಮಾನ್ಯ ಜನರನ್ನು ಬೆಚ್ಚಿಬೀಳಿಸುವಂತಿದೆ. ಇದು ವ್ಯವಸ್ಥೆಯ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಾವಿನಲ್ಲೂ ವ್ಯಾಪಾರ ಹುಡುಕುತ್ತಿರುವುದು ಅಕ್ಷಮ್ಯ ಅಪರಾಧ ಹಾಗೂ ಹೇಯ ಕೃತ್ಯ. ರಾಯಚೂರಿನ ಮಾರುತಿ ಬಡಾವಣೆಯ ಸ್ಮಶಾನದಲ್ಲಿ ಹೂತುಹಾಕಿದ್ದ ಮೃತದೇಹಗಳ ಅಂಗಾಂಗಗಳು ಹಾಗೂ ಮೂಳೆಗಳನ್ನು ಹೊರತೆಗೆದು ಸಾಗಿಸುತ್ತಿದ್ದುದರ ಸಂಬಂಧ, ಸ್ಮಶಾನದ ಕಾವಲುಗಾರ ಸೇರಿದಂತೆ ಮೂವರನ್ನು ನೇತಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಣ್ಣುಮಾಡಿದ ಶವಗಳನ್ನು ಕಾವಲುಗಾರ ಹನುಮಯ್ಯ ಮೇಲಕ್ಕೆತ್ತಿ, ಖಾಸಗಿ ಕಾಲೇಜಿನ ಸಿಬ್ಬಂದಿಗೆ 500 ರೂ.ಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾದ ಕಾಲೇಜು ನೌಕರರಾದ ರಾಜು ಹಾಗೂ ಅಥರ್ ಎಂಬುವವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನಾ ಉದ್ದೇಶಕ್ಕಾಗಿ ಶವದ ಭಾಗಗಳನ್ನು ಈ ರೀತಿ ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ವೈದ್ಯಕೀಯ ಶಿಕ್ಷಣಕ್ಕೆ ಕಾನೂನುಬದ್ಧ ಮಾರ್ಗಗಳ ಮೂಲಕ ದೇಹದಾನ ಅಥವಾ ಅಧಿಕೃತ ಒಪ್ಪಿಗೆ ಪಡೆಯಲಾಗುತ್ತದೆ. ಆದರೆ, ಪ್ರಕ್ರಿಯೆಗಳನ್ನು ಗಾಳಿಗೆ ತೂರಿ, ಹಣದಾಸೆಗಾಗಿ ಶವಗಳನ್ನು ಕದ್ದು ಮಾರಾಟ ಮಾಡುತ್ತಿರುವ ಅಮಾನವೀಯ ಜಾಲಗಳು ಸಕ್ರಿಯವಾಗಿರುವುದು ವಿಷಾದಕರ.

ಮೃತರ ದೇಹವನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ಮಾಡುವುದು ನಮ್ಮ ಸಂಸ್ಕೃತಿಯ ಭಾಗ. ಆದರೆ ದುಡ್ಡಿಗಾಗಿ ಎಂತಹ ನೀಚ ಮಟ್ಟಕ್ಕೂ ಇಳಿಯಲು ಮನುಷ್ಯ ಸಿದ್ಧನಾಗುತ್ತಿದ್ದಾನೆ ಎನ್ನುವುದಕ್ಕೆ ಈ ದಂಧೆಯೇ ಸಾಕ್ಷಿ. ನಮ್ಮ ಮೌಲ್ಯಗಳು ಎಷ್ಟು ಕುಸಿದಿವೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದರ ಹಿಂದೆ ಇರುವ ಪ್ರಮುಖ ಸೂತ್ರಧಾರರನ್ನು ಹಾಗೂ ವೈದ್ಯಕೀಯ ಸಂಸ್ಥೆಗಳ ಕೈವಾಡವಿದ್ದರೆ ಅವರನ್ನೂ ಪತ್ತೆ ಹಚ್ಚಿ, ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯಗಳು ಬೇರೆಡೆಯೂ ನಡೆಯುತ್ತಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಿ, ನಡೆಯದಂತೆ ಕಡಿವಾಣ ಹಾಕಬೇಕು. ಹಣಕ್ಕಾಗಿ ಮನುಷ್ಯತ್ವ ಸಾಯದಂತೆ ಎಚ್ಚರ ವಹಿಸಬೇಕಾದ ಸಮಯ ಇದು. ಸಾವಿಗೂ ಗೌರವವಿಲ್ಲದಂತಾದರೆ ಅಂತಹ ಸಮಾಜದ ಉಳಿವಿಗೆ ಅರ್ಥವೇ ಇರುವುದಿಲ್ಲ. ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಗುರುತರ ಜವಾಬ್ದಾರಿ ಸರ್ಕಾರ ಮತ್ತು ಜನತೆಯ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net