ಸಂಪಾದಕೀಯ: ಪಂಚಾಯಿತಿ ಚುನಾವಣೆ ಸನ್ನಿಹಿತ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಜಾಪ್ರಭುತ್ವದಲ್ಲಿ ಸ್ಥಳೀಯ ಆಡಳಿತ ಸುಗಮವಾಗಿ ನಡೆಯುವಲ್ಲಿ ಪಂಚಾಯಿತಿ ವ್ಯವಸ್ಥೆ ಪ್ರಮುಖ ಭೂಮಿಕೆ ನಿಭಾಯಿಸುತ್ತದೆ. ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಎಂಬ ಮೂರು ಹಂತಗಳ ಈ ಮಜಲು ಪ್ರಜಾತಂತ್ರದ ಆಶಯಗಳನ್ನು ಈಡೇರಿಸುವಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಅಧಿಕಾರದ ವಿಕೇಂದ್ರೀಕರಣವು ಪ್ರಜಾಪ್ರಭುತ್ವದ ಪ್ರಮುಖ ಆಶಯಗಳಲ್ಲೊಂದು. ಪಂಚಾಯಿತಿಯ ಮೂರು ಹಂತಗಳು ಸರಿಯಾಗಿ ಕಾರ್ಯನಿರ್ವಹಿಸುವ ಮೂಲಕ, ಮಿತಿಗಳ ನಡುವೆಯೂ ಈ ಉದ್ದೇಶ ಪೂರೈಸುವಲ್ಲಿ ಮುಂದಾಗಬಹುದು. ಕರ್ನಾಟಕದಲ್ಲಿ ಅಕ್ಟೋಬರ್-ನವೆಂಬರ್ ವೇಳೆಗೆ ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆ ಈಗ ಗೋಚರಿಸಿದೆ. ವಾಸ್ತವದಲ್ಲಿ, ಇಷ್ಟೊತ್ತಿಗಾಗಲೇ ಈ ಚುನಾವಣೆ ನಡೆದಿರಬೇಕಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ನಡೆದಿಲ್ಲ. ಹೀಗಾಗಿ, ಜನಪ್ರತಿನಿಧಿಗಳ ಬದಲಿಗೆ ಆಡಳಿತಾಧಿಕಾರಿಗಳೇ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ. ಕೆಲವೊಮ್ಮೆ ಅನಿವಾರ್ಯ ಕಾರಣಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಆದರೆ ಅನಿರ್ದಿಷ್ಟ ಕಾಲ ಇದೇ ವ್ಯವಸ್ಥೆ ಮುಂದುವರಿಯುವುದು ಸೂಕ್ತವಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಕೂಡ ಪಂಚಾಯಿತಿ ಚುನಾವಣೆ ನಡೆಸುವ ಕುರಿತು ಒಲವು ವ್ಯಕ್ತವಾಗಿರುವುದು ಗಮನಾರ್ಹ. ‘ಅಕ್ಟೋಬರ್-ನವೆಂಬರ್​ನಲ್ಲಿ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ತಯಾರಿದೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ಕಾಯ್ದೆಯನ್ವಯ, ಮೀಸಲಾತಿ ನಿಗದಿ ಮಾಡಿ ಈ ಮಾಸಾಂತ್ಯಕ್ಕೆ ಅಥವಾ ಮುಂದಿನ ತಿಂಗಳು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಮೀಸಲಾತಿ ಪಟ್ಟಿ ನೀಡಿದ ನಂತರ 45 ದಿನಗಳೊಳಗೆ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಬಹುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಚುನಾವಣೆಗೆ ಮುನ್ನ ವಿವಿಧ ಪೂರ್ವತಯಾರಿ ಅಗತ್ಯವಿದೆ. ಜನಸಂಖ್ಯೆ ಆಧಾರದ ಮೇಲೆ ಪಂಚಾಯಿತಿ ವ್ಯಾಪ್ತಿಯ ವಾರ್ಡ್​ಗಳ ಗಡಿ ಗುರುತಿಸುವ/ ಮರುಹಂಚಿಕೆಯ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಮೀಸಲಾತಿ ನಿಗದಿಮಾಡುವ ಕೆಲಸ ಪ್ರಗತಿಯಲ್ಲಿದ್ದು, ಇದು ಸಿದ್ಧವಾದ ನಂತರ, ಕರಡು ಯಾದಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಬೇಕಾಗುತ್ತದೆ. ಸಾಮಾನ್ಯವಾಗಿ ಮೀಸಲಾತಿ ಅಂತಿಮವಾದ ಬಳಿಕ ಕನಿಷ್ಠ 45 ದಿನಗಳ ಬಳಿಕ ಚುನಾವಣಾ ಆಯೋಗವು ಚುನಾವಣಾ ದಿನಾಂಕದ ಅಧಿಸೂಚನೆ ಹೊರಡಿಸುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಆಯೋಗ ಈಗಾಗಲೇ ಸಿದ್ಧತೆ ಕೈಗೊಂಡಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಪಂಚಾಯಿತಿ ಚುನಾವಣೆ ಹತ್ತಿರದಲ್ಲಿದೆಯೆಂದು ಭಾವಿಸಬಹುದು. ರಾಜ್ಯದಲ್ಲಿ 31 ಜಿಪಂಗಳಿದ್ದು, ಒಟ್ಟು 1,083 ಸ್ಥಾನಗಳಿವೆ. 229 ತಾಪಂಗಳಿದ್ದು, 3,903 ಸದಸ್ಯ ಸ್ಥಾನಗಳಿವೆ. ಒಟ್ಟು 5,950 ಗ್ರಾಮ ಪಂಚಾಯಿತಿಗಳಿದ್ದು, 96 ಸಾವಿರ ಸದಸ್ಯರಾಗುತ್ತಾರೆ. ಅಂದರೆ ಒಂದು ಲಕ್ಷಕ್ಕಿಂತ ತುಸು ಹೆಚ್ಚು ಸ್ಥಳೀಯ ಜನಪ್ರತಿನಿಧಿಗಳಾಗುತ್ತಾರೆ. ಈ ಪೈಕಿ ಸರಿಸುಮಾರು ಶೇ.50 ಸೀಟುಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ. ಇದಲ್ಲದೆ, ರಾಜಕೀಯದಲ್ಲಿ ಆಸಕ್ತಿಯುಳ್ಳ ಯುವಜನರು ಸಹ ಅವಕಾಶ ಪಡೆಯುವ ಸಂಭವ ಇರುತ್ತದೆ. ಸ್ಥಳೀಯ ಆಡಳಿತವು ಜನರಿಗೆ ಅತಿ ನಿಕಟವಾಗಿ ಕಾರ್ಯನಿರ್ವಹಿಸಲು ವೇದಿಕೆ ಒದಗಿಸುವುದರಿಂದಾಗಿ, ಭವಿಷ್ಯದಲ್ಲಿ ಆಡಳಿತದ ಮುಂದಿನ ಹಂತಗಳಿಗೆ ತೆರಳಲು ಯುವಜನರಿಗೆ ಇದು ಉತ್ತಮ ಅನುಭವವನ್ನು ನೀಡುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಚಿಹ್ನೆಗಳಿಲ್ಲದೆ ನಡೆದರೆ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಪಕ್ಷಸಹಿತವಾಗಿರುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ವಿವೇಚನೆ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸುವುದು ಮುಖ್ಯ. ಇದರಲ್ಲಿ ರಾಜಕೀಯ ಪಕ್ಷಗಳ ಹೊಣೆಗಾರಿಕೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net