

ಕೊಪ್ಪಳದಲ್ಲಿ ಆನ್ಲೈನ್ ಗೇಮ್ಸ್ ಹುಚ್ಚಿಗೆ ಬಿದ್ದ ಯುವಕನೊಬ್ಬ ಸಾಲದ ಬಾಧೆ ತಾಳಲಾರದೆ ಹೆತ್ತ ತಂದೆ ಮತ್ತು ಸ್ವಂತ ಅಕ್ಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ತಾಯಿಯನ್ನು ಮಾರಣಾಂತಿಕವಾಗಿ ಗಾಯಗೊಳಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ತಂತ್ರಜ್ಞಾನದ ಪ್ರಗತಿ ಮನರಂಜನೆಯ ಹೆಸರಿನಲ್ಲಿ ಹೇಗೆ ಮಾರಕ ವ್ಯಸನವಾಗಿ ಬದಲಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಕೆಲವು ತಿಂಗಳುಗಳ ಹಿಂದಷ್ಟೇ ಸರ್ಕಾರ ಇಂತಹ ಆನ್ಲೈನ್ ಗೇಮ್ಳನ್ನು ಮತ್ತು ಜೂಜಾಟಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ, ವಾಸ್ತವದಲ್ಲಿ ಈ ನಿಷೇಧ ಕಾಗದಕ್ಕಷ್ಟೇ ಸೀಮಿತವಾಗಿದೆಯೇ ಹೊರತು ಯುವಕರ ಮೊಬೈಲ್ ಪರದೆಗಳಿಂದ ಇವು ಮಾಯವಾಗಿಲ್ಲ. ಅನಧಿಕೃತ ಅಪ್ಲಿಕೇಶನ್ಗಳು, ವಿಪಿಎನ್ ತಂತ್ರಜ್ಞಾನ ಹಾಗೂ ನಕಲಿ ವೆಬ್ಸೈಟ್ಗಳ ಮೂಲಕ ಇವು ಇಂದಿಗೂ ರಾಜಾರೋಷವಾಗಿ ಮುಂದುವರಿದಿವೆ. ಸರ್ಕಾರ ಕಣ್ಣು ಮುಚ್ಚಿ ಕುಳಿತರೆ, ಇಂತಹ ಜಾಲಗಳು ತೆರೆಮರೆಯಲ್ಲಿ ಹೇಗೆ ಯುವಕರ ಭವಿಷ್ಯವನ್ನು ಸಮಾಧಿ ಮಾಡುತ್ತವೆ ಎಂಬುದಕ್ಕೆ ಕೊಪ್ಪಳದ ಘಟನೆಯೇ ಸಾಕ್ಷಿ.
ಆನ್ಲೈನ್ ಗೇಮ್್ಸ ಗೀಳು ಆರಂಭದಲ್ಲಿ ಕೇವಲ ಕುತೂಹಲ ಅಥವಾ ಕಾಲಹರಣದಂತೆ ತೋರುತ್ತದೆ. ಆದರೆ, ಕ್ರಮೇಣ ಇದು ಅಡಿಕ್ಷನ್ ಆಗಿ ಮಾರ್ಪಡುತ್ತದೆ. ಕಳೆದುಕೊಂಡ ಹಣವನ್ನು ಮರಳಿ ಗಳಿಸುವ ಹಠಕ್ಕೆ ಬಿದ್ದು, ಯುವಕರು ತಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಲೇವಾದೇವಿದಾರರಿಂದ ಲಕ್ಷಾಂತರ ರೂ. ಸಾಲ ಮಾಡುತ್ತಾರೆ. ಸಾಲದ ಸುಳಿಗೆ ಸಿಲುಕಿದಾಗ ಉಂಟಾಗುವ ತೀವ್ರ ಮಾನಸಿಕ ಒತ್ತಡ, ಖಿನ್ನತೆ ಮತ್ತು ಹತಾಶೆ ಅವರ ವಿವೇಚನೆಯನ್ನೇ ನಾಶಪಡಿಸುತ್ತದೆ. ಕೊಪ್ಪಳದ ಯುವಕನೂ ಇದೇ ಮಾನಸಿಕ ವಿಕೃತಿಗೆ ಬಲಿಯಾಗಿದ್ದಾನೆ. ತನ್ನ ದುರ್ವ್ಯಸನಕ್ಕೆ ಅಡ್ಡಿಯಾದ ಹೆತ್ತವರನ್ನೇ ಶತ್ರುಗಳಂತೆ ಕಂಡು, ಅವರ ಕೊಲೆ ಮಾಡಲೂ ಹಿಂಜರಿಯದ ಕ್ರೌರ್ಯ ಆತನಲ್ಲಿ ಜಾಗೃತವಾಗಿದೆ ಎಂದರೆ ಈ ಗೇಮ್ಳು ಯುವಕರ ಮಿದುಳನ್ನು ಹೇಗೆ ವಿಕೃತಗೊಳಿಸುತ್ತಿವೆ ಎಂಬುದನ್ನು ಊಹಿಸಬಹುದು.
ಕೇವಲ ಕಾಯ್ದೆಗಳನ್ನು ಜಾರಿಗೆ ತಂದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ನಿಷೇಧಿತ ಗೇಮ್ಳು ಯಾವುದೇ ರೂಪದಲ್ಲಿ ಇಂಟರ್ನೆಟ್ನಲ್ಲಿ ಲಭ್ಯವಿಲ್ಲದಂತೆ ಮಾಡಲು ಸೈಬರ್ ಕ್ರೖೆಂ ಪೊಲೀಸರು ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕಟ್ಟುನಿಟ್ಟಿನ ನಿಗಾ ಇಡಬೇಕಾಗಿದೆ. ಇಂತಹ ಆಪ್ಗಳನ್ನು ಒದಗಿಸುವ ಲಿಂಕ್ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಬೇಕು. ಆನ್ಲೈನ್ ಗೇಮ್್ಸ ಆಡಲು ಯಾರಿಗೂ ಸಾಧ್ಯವಾಗದಂತೆ ತಂತ್ರಜ್ಞಾನ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರವೂ ಇಲ್ಲಿ ಅತ್ಯಂತ ಮುಖ್ಯವಾಗಿದೆ. ಮೊಬೈಲ್ನಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸದಿದ್ದರೆ ಇಂತಹ ಅನಾಹುತಗಳು ಮರುಕಳಿಸುತ್ತಲೇ ಇರುತ್ತವೆ. ಮಕ್ಕಳ ನಡವಳಿಕೆಯಲ್ಲಿನ ಬದಲಾವಣೆ, ಹಠಾತ್ ಕೋಪ, ಒಂಟಿತನ ಮತ್ತು ಹಣದ ಬೇಡಿಕೆಯನ್ನು ಪಾಲಕರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಈಗಲಾದರೂ ಎಚ್ಚೆತ್ತು ತೀವ್ರ ಸ್ವರೂಪದ ತಾಂತ್ರಿಕ ಮತ್ತು ಕಾನೂನು ಕ್ರಮಕ್ಕೆ ಮುಂದಾಗಬೇಕು.