ಸಂಪಾದಕೀಯ | ಸಾರ್ವಜನಿಕರ ಆರೋಗ್ಯ ಮುಖ್ಯ

ಸಂಪಾದಕೀಯ | ಸಾರ್ವಜನಿಕರ ಆರೋಗ್ಯ ಮುಖ್ಯ
ಸಂಪಾದಕೀಯ | ಸಾರ್ವಜನಿಕರ ಆರೋಗ್ಯ ಮುಖ್ಯ
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಹಲವು ಪಂಚತಾರಾ ಹೋಟೆಲ್​ಗಳು ಮತ್ತು ಕೆಎಫ್​ಸಿಯಂತಹ ಬೃಹತ್ ಮಳಿಗೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅವಧಿ ಮೀರಿದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಸೌಂದರ್ಯವರ್ಧಕಗಳ ಸ್ಯಾಂಪಲ್​ಗಳನ್ನು ಔಷಧ ನಿಯಂತ್ರಕರು ವಶಪಡಿಸಿಕೊಂಡು ಪರೀಕ್ಷೆಗೆ ಕಳಿಸಿದ್ದಾರೆ. ಇವೆಲ್ಲವೂ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಶ್ಲಾಘನೀಯ ಕ್ರಮಗಳು. ಆದರೆ, ಈ ರೀತಿಯ ಕಾರ್ಯಾಚರಣೆಗಳು ಕೇವಲ ಆರಂಭಶೂರತ್ವ ಅಥವಾ ಕಣ್ಣೊರೆಸುವ ತಂತ್ರವಾಗಬಾರದು.

ಅಪ್ರಾಮಾಣಿಕತೆ ಮತ್ತು ಲಾಭಕೋರತನವನ್ನು ಬೇರುಸಹಿತ ಕಿತ್ತೊಗೆಯಲು ನಿರಂತರ ತಪಾಸಣೆ ಅಗತ್ಯ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವ ಯಾವುದೇ ಸಂಸ್ಥೆ ಇರಲಿ, ಅವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಕೆಲಸವಾಗಬೇಕು. ನಮ್ಮಲ್ಲಿ ಯಾವುದೇ ಇಲಾಖೆಯ ಕಾರ್ಯಾಚರಣೆಗಳು ಹೆಚ್ಚಾಗಿ ಆರಂಭಶೂರತ್ವಕ್ಕಷ್ಟೇ ಸೀಮಿತಗೊಳ್ಳುವ ಉದಾಹರಣೆಗಳು ಅಪಾರ. ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುವಾಗ, ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದಾಗ ಮಾತ್ರ ಇಲಾಖೆಗಳು ಎಚ್ಚೆತ್ತುಕೊಂಡು ಸರಣಿ ದಾಳಿಗಳನ್ನು ನಡೆಸಿ, ನಂತರ ಮೌನಕ್ಕೆ ಜಾರುವುದು ಸಾಮಾನ್ಯ ಪರಿಪಾಠವಾಗಿದೆ. ಇಂತಹ ಕಣ್ಣೊರೆಸುವ ತಂತ್ರಗಳು ಅಥವಾ ಹಠಾತ್ ದಾಳಿಗಳಿಂದ ಅಪ್ರಾಮಾಣಿಕ ವ್ಯಾಪಾರಿಗಳು ಮತ್ತು ಲಾಭಕೋರರಿಗೆ ತಾತ್ಕಾಲಿಕ ಭಯ ಉಂಟಾಗಬಹುದೇ ಹೊರತು, ಸಮಸ್ಯೆ ಬೇರುಸಹಿತ ನಿವಾರಣೆಯಾಗುವುದಿಲ್ಲ. ದಾಳಿಗಳು ತಣ್ಣಗಾಗುತ್ತಿದ್ದಂತೆ ಮತ್ತೆ ಹಳೆಯ ಅಕ್ರಮಗಳು ಮರುಕಳಿಸುತ್ತವೆ.

ಆಹಾರ ಮತ್ತು ಸೌಂದರ್ಯವರ್ಧಕಗಳು ನೇರವಾಗಿ ಮನುಷ್ಯನ ದೇಹ ಹಾಗೂ ಜೀವಕ್ಕೆ ಸಂಬಂಧಿಸಿದವುಗಳು. ಕಳಪೆ ಆಹಾರ, ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳು ತಕ್ಷಣಕ್ಕೆ ಅಥವಾ ದೀರ್ಘಾವಧಿಯಲ್ಲಿ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಪಂಚತಾರಾ ಹೋಟೆಲ್ ಅಥವಾ ಜಾಗತಿಕ ಬ್ರಾ್ಯಂಡ್ ಎಂದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಇರುತ್ತದೆ ಎಂಬುದು ಗ್ರಾಹಕರ ಗ್ರಹಿಕೆ. ಆದರೆ ಈ ದಾಳಿಗಳಿಂದ ಕಲ್ಪನೆ ಸುಳ್ಳಾಗಿದೆ. ಹಣಗಳಿಕೆಯೊಂದೇ ಮುಖ್ಯ ಗುರಿಯಾಗಿರುವ ಇಂದಿನ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವ ಮನಸ್ಥಿತಿ ಎಲ್ಲೆಡೆ ಹರಡಿದೆ.

ಈ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಸಂಬಂಧಪಟ್ಟ ನಿಯಂತ್ರಣ ಪ್ರಾಧಿಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ದಾಳಿಗಳು ಕೇವಲ ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮವಾಗಬಾರದು. ವರ್ಷಪೂರ್ತಿ, ಯಾವುದೇ ಮುನ್ಸೂಚನೆ ನೀಡದೆ ನಿರಂತರವಾಗಿ ಹಠಾತ್ ತಪಾಸಣೆ ನಡೆಸುವ ತಾಂತ್ರಿಕ ಮತ್ತು ನಿಪುಣ ತಂಡಗಳನ್ನು ರಚಿಸಬೇಕು. ತಪ್ಪು ಎಸಗಿದ ಸಂಸ್ಥೆಗಳಿಗೆ ಕೇವಲ ಸಣ್ಣ ಮೊತ್ತದ ದಂಡ ವಿಧಿಸಿ ಬಿಡಬಾರದು. ನಿಯಮ ಉಲ್ಲಂಘನೆ ಮಾಡಿದ ಸಂಸ್ಥೆಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ಅಥವಾ ಕಾಯಂ ಆಗಿ ರದ್ದುಗೊಳಿಸಬೇಕು. ಜೊತೆಗೆ, ಅಂತಹ ಸಂಸ್ಥೆಗಳ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಗ್ರಾಹಕರಿಗೆ ಮುನ್ನೆಚ್ಚರಿಕೆ ನೀಡುವುದು ಅತ್ಯಗತ್ಯ. ಆಗ ಇತರ ಸಂಸ್ಥೆಗಳು, ಹೋಟಲ್​ಗಳು ಎಚ್ಚೆತ್ತುಕೊಂಡು ಆಹಾರದ ಗುಣಮಟ್ಟ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬಲ್ಲವು. ಸಾರ್ವಜನಿಕ ಆರೋಗ್ಯ ರಕ್ಷಣೆ ಎಂಬುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಜನರಲ್ಲಿ ಆಡಳಿತದ ಬಗ್ಗೆ ನಂಬಿಕೆ ಮೂಡಬೇಕಾದರೆ, ವ್ಯವಸ್ಥೆಯು ಅಕ್ರಮ ಎಸಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ದೃಢವಾಗಿ ನಿಲ್ಲಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net