ಸಂಪಾದಕೀಯ: ದಸರಾ ಕಳೆಗಟ್ಟಲಿ

ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು’ ಎಂದೂ ಅವರು ನಿರ್ದೇಶನ ನೀಡಿರುವುದು ಗಮನಾರ್ಹ. ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಳುಗಳಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ನಡೆಯಲಿರುವುದು ವಿಶೇಷ. ವಿವಿಧ ಧರ್ಮಗುರುಗಳನ್ನು ಸರ್ಕಾರ ಆಹ್ವಾನಿಸಲಿದೆ.
editorial news
ಸಂಪಾದಕೀಯ: ದಸರಾ ಕಳೆಗಟ್ಟಲಿ
Published on: 

ಬೆಂಗಳೂರು: ನಾಡು ನವರಾತ್ರಿಪರ್ವಕ್ಕೆ ಅಣಿಯಾಗುತ್ತಿದೆ. ಅದರಲ್ಲೂ ಮೈಸೂರು ದಸರಾ ಉತ್ಸವವನ್ನು ನಮ್ಮಲ್ಲಿ ನಾಡಹಬ್ಬ ಎಂದೇ ಆಚರಿಸುವ ಪರಂಪರೆಯಿದ್ದು, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಇದರ ಖ್ಯಾತಿ ಹಬ್ಬಿದೆ. ದಸರಾ ಜಂಬೂಸವಾರಿಯಂತೂ ಬಹು ಆಕರ್ಷಕ. ಕರ್ನಾಟಕವು ವೈವಿಧ್ಯಮಯ ಸಾಂಸ್ಕೃತಿಕ ಸಿರಿಯನ್ನು ಹೊಂದಿದ್ದು, ಈ ಶ್ರೀಮಂತಿಕೆಯನ್ನು ಪ್ರದರ್ಶಿಸಲು ದಸರಾ ಉತ್ತಮ ವೇದಿಕೆಯನ್ನು ಸಹ ಒದಗಿಸುತ್ತದೆ. ಈ ಬಾರಿಯ ದಸರಾ ಆಚರಣೆ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೈಸೂರಿನಲ್ಲಿ ಶನಿವಾರ ಸಭೆ ನಡೆಸಿ ಕೆಲ ಸಲಹೆಸೂಚನೆಗಳನ್ನು ನೀಡಿದ್ದಾರೆ.

ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ಮಹೋತ್ಸವ ನಡೆಯಬೇಕು. ದಸರಾ ಮೆರವಣಿಗೆಯಲ್ಲಿ ಒಂದೇ ರೀತಿಯ ತಂಡಗಳ ಬದಲು ವೈವಿಧ್ಯಮಯ ಕಲಾತಂಡಗಳಿಗೆ ಅವಕಾಶ ನೀಡಬೇಕು ಎಂದು ಅವರು ಸೂಚಿಸಿದ್ದಾರೆ. ‘ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್​ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು’ ಎಂದೂ ಅವರು ನಿರ್ದೇಶನ ನೀಡಿರುವುದು ಗಮನಾರ್ಹ. ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಳುಗಳಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ನಡೆಯಲಿರುವುದು ವಿಶೇಷ. ವಿವಿಧ ಧರ್ಮಗುರುಗಳನ್ನು ಸರ್ಕಾರ ಆಹ್ವಾನಿಸಲಿದೆ.

ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ತಂಡಗಳು ಸಹ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಇದರೊಂದಿಗೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳ ಸ್ತಬ್ಧಚಿತ್ರಗಳಿಗೂ ಅವಕಾಶ ನೀಡಿರುವುದು ಮತ್ತೊಂದು ವಿಶೇಷ. ‘ಅಲ್ಲಿನ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳನ್ನು ಕಳಿಸುವಂತೆ ಸರ್ಕಾರದ ವತಿಯಿಂದ ಪತ್ರ ಬರೆಯಲಾಗಿದೆ’ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮಣಿಪುರದ ರಾಸ್​ಲೀಲಾ, ಕೇರಳದ ಪೂತನ್ ಮತ್ತು ಥೀರಾ, ತೆಲಂಗಾಣದ ಕೊಂಬು ಕೋಯ, ತಮಿಳುನಾಡಿನ ಕರಗಟ್ಟಂ, ಮಧ್ಯಪ್ರದೇಶದ ಗಂಗೌರ್ ಕಲಾಪ್ರಕಾರಗಳು ಕನ್ನಡ-ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ದಸರಾದಲ್ಲಿ ಪ್ರದರ್ಶನಗೊಳ್ಳಲಿವೆ. ಭಾರತದ ವಿಶೇಷತೆಯೇ ಅದು.

ಪ್ರತಿ ರಾಜ್ಯವೂ ತನ್ನದೇ ಆದ ಸಾಂಸ್ಕೃತಿಕ ವೈವಿಧ್ಯ, ಇತಿಹಾಸ, ಹಿರಿಮೆಯನ್ನು ಹೊಂದಿದೆ. ಪ್ರತಿ ಕಲೆಯೂ ವಿವಿಧ ಅರ್ಥಗಳನ್ನು ಹೊಳೆಯಿಸಬಲ್ಲ ಶಕ್ತಿ ಹೊಂದಿದೆ. ಇತರ ರಾಜ್ಯಗಳ ಜನರೂ ಆ ಪರಂಪರೆಯನ್ನು ಕಂಡು ಆನಂದಿಸಲು ಸೂಕ್ತ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ದಸರಾ ಉತ್ಸವಕ್ಕೆ ಅನ್ಯ ರಾಜ್ಯಗಳ ಕಲಾ ಪ್ರಕಾರಗಳಿಗೆ ಅವಕಾಶ ನೀಡಿರುವುದು ಸೂಕ್ತ ಹೆಜ್ಜೆ ಎಂದೇ ಹೇಳಬೇಕಾಗುತ್ತದೆ. ದಸರಾ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಪ್ರದರ್ಶನಕ್ಕೆ ಬಹಳ ಮಹತ್ವವಿದೆ. ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ನೋಡುವ ಅವಕಾಶ ವೀಕ್ಷಕರಿಗೆ ಸಿಗುತ್ತದೆ. ಹಲವು ಮಾಧ್ಯಮಗಳ ಮೂಲಕ ನೇರಪ್ರಸಾರವಾಗುವುದರಿಂದ ಇತರೆಡೆಯ ಜನರಿಗೂ ಈ ಕಲಾ ರಸದೌತಣ ದೊರೆಯುತ್ತದೆ. ಇದಲ್ಲದೆ, ಬೇರೆ ದೇಶಗಳ ಜನರೂ ದಸರಾ ಕಣ್ತುಂಬಿಕೊಳ್ಳಲೆಂದೇ ಮೈಸೂರಿಗೆ ಬರುವುದಿದೆ.

ಇಂದಿನ ಪೀಳಿಗೆಗೂ ನಮ್ಮ ಕಲಾವೈವಿಧ್ಯ ನೋಡಲು ಸಿಕ್ಕರೆ ಅವರಲ್ಲೂ ಆ ಬಗ್ಗೆ ಅರಿವು ಮತ್ತು ಪ್ರೀತಿ ಬೆಳೆಯಲು ಅನುವಾಗುತ್ತದೆ. ಏಕೆಂದರೆ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಸಾಗುತ್ತಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಧಾರ್ವಿುಕ-ಸಾಂಸ್ಕೃತಿಕ ಆಯಾಮಗಳನ್ನು ಹೊಂದಿರುವ ದಸರಾದಂಥ ಆಚರಣೆಗಳು ಬಹುಮುಖ್ಯ ಪಾತ್ರ ವಹಿಸಬಲ್ಲವು. ಈ ಮಹತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡು ದಸರಾದ ರೂಪುರೇಷೆ ತಯಾರಾಗಲಿ; ಉತ್ಸವ ಕಳೆಗಟ್ಟಲಿ ಎಂದು ಆಶಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net