ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸ್ ವ್ಯವಸ್ಥೆಯಲ್ಲಿ ಸರ್ಕಾರ ಭಾರಿ ಬದಲಾವಣೆ ಮಾಡಿದೆ. ಬೆಂಗಳೂರಿನ ಆಡಳಿತಕ್ಕೆ ಸಂಬಂಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾದರಿಯಲ್ಲಿ ಐದು ಪೊಲೀಸ್ ಕಮಿಷನರೇಟ್ ಸೃಜಿಸಲಾಗಿದ್ದು, ಜಿಬಿಎ ಮುಖ್ಯ ಆಯುಕ್ತರ ಹುದ್ದೆಯ ಹಾಗೆ ಮುಖ್ಯ ಪೊಲೀಸ್ ಆಯುಕ್ತ ಹುದ್ದೆ ಸೃಷ್ಟಿಸಿ, ಹಿರಿಯ ಐಪಿಎಸ್ ಅಧಿಕಾರಿ ಆರ್.ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಅದೇ ರೀತಿ, ಐದು ಆಯುಕ್ತಾಲಯಗಳಿಗೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ.
ಜಿಬಿಎ ಸ್ಥಾಪನೆ ಮುನ್ನ ಬಿಬಿಎಂಪಿಯು ನಗರ ಆಡಳಿತದ ಹೊಣೆ ಹೊತ್ತಿತ್ತು. ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರನ್ನು ಒಂದೇ ಪಾಲಿಕೆ ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಗದು ಎಂಬ ಕಾರಣಕ್ಕೆ ಐದು ಪಾಲಿಕೆಗಳನ್ನಾಗಿ ವಿಭಜಿಸಿ, ಪ್ರತಿ ಪಾಲಿಕೆಗೂ ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಯಿತು. 2025ರ ಸೆ.1ರಂದು ಜಿಬಿಎ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಐದು ಪಾಲಿಕೆಗಳಿಗೆ ಚುನಾವಣೆ ನಡೆಯುವುದು ಬಾಕಿ ಇದೆ. ಬೆಂಗಳೂರು ನಿತ್ಯವೂ ಬೆಳೆಯುತ್ತಿರುವ ನಗರ ಎನ್ನಬಹುದು.
ಉದ್ಯಮ ವಲಯದ ಪ್ರಮುಖರು, ರಾಜತಾಂತ್ರಿಕರು ಮುಂತಾದ ಗಣ್ಯಸಮೂಹದವರು ಇಲ್ಲಿಗೆ ಬರುತ್ತಿರುತ್ತಾರೆ. ಇನ್ನೊಂದೆಡೆ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲದೆ, ಅನ್ಯ ರಾಜ್ಯಗಳಿಂದಲೂ ಪ್ರತಿದಿನವೂ ಸಾವಿರಾರು ಜನರು ಬದುಕನ್ನು ಅರಸಿಕೊಂಡು ಬೆಂಗಳೂರಿಗೆ ಬರುತ್ತಾರೆ. ಹೀಗಾಗಿ ಇಲ್ಲಿನ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ರಂಗಗಳಲ್ಲಿ ಜಾಗತಿಕ ನಗರವಾಗಿ ಗುರುತಿಸಿಕೊಂಡಿದೆ. ಬೇರೆ ಬೇರೆ ಉದ್ಯಮಗಳೂ ಇಲ್ಲಿ ನೆಲೆಯೂರಿವೆ. ಇಲ್ಲೆಲ್ಲ ಅಪಾರ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಬೆಂಗಳೂರಿಗೆ ಬಂದರೆ ಏನಾದರೊಂದು ಕೆಲಸ ಮಾಡಿ ಜೀವನ ಸಾಗಿಸಬಹುದು ಎಂಬ ನಂಬಿಕೆ ಮೂಡಿರುವುದರಿಂದಾಗಿ, ಜನರನ್ನು ಆಕರ್ಷಿಸುತ್ತದೆ. ಹೀಗಾಗಿ ಬಹುಸಂಸ್ಕೃತಿ ನಗರವಾಗಿ ರೂಪುಗೊಂಡಿದೆ. ಯಾವುದೇ ನಗರ ವಿಪರೀತ ವೇಗದಲ್ಲಿ ಬೆಳೆದಾಗ ರಸ್ತೆ, ನೀರು ಇತ್ಯಾದಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅದರಲ್ಲೂ ಈಗಂತೂ ಡಿಜಿಟಲ್ ಅಪರಾಧಗಳ ಪ್ರಮಾಣ ಬೇರೆ ತೀವ್ರವಾಗಿ ಹೆಚ್ಚುತ್ತಿದೆ.
ಬೃಹತ್ತಾಗಿ ಬೆಳೆದ ನಗರದಲ್ಲಿ ಜನಜೀವನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳ ಹೊಣೆಗಾರಿಕೆ. ಆಡಳಿತದ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಸರ್ಕಾರಗಳು ಕಾಲಕಾಲಕ್ಕೆ ಸೂಕ್ತ ನೀತಿನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಐದು ಪೊಲೀಸ್ ಆಯುಕ್ತಾಲಯಗಳನ್ನು ಸೃಜಿಸುವಂತೆ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಶಿಫಾರಸು ಮಾಡಿದ್ದರು. ಐದು ನಗರ ಪಾಲಿಕೆಗಳು ಮತ್ತು ಐದು ಪೊಲೀಸ್ ಆಯುಕ್ತಾಲಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ದೊಡ್ಡ ಸಂಖ್ಯೆಯಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನೇಮಕವಾಗಿದ್ದಾರೆ; ಇನ್ನೂ ಕೆಲವು ಹಂತದ ಅಧಿಕಾರಿ-ಸಿಬ್ಬಂದಿ ನೇಮಕವಾಗಬೇಕಿದೆ.
ಆಡಳಿತಾತ್ಮಕ ವಿಭಜನೆಯು ಹೆಸರಿಗೆ ಮಾತ್ರವಾಗದೆ, ವಾಸ್ತವದಲ್ಲಿ ಪರಿಣಾಮ ಗೋಚರಿಸಬೇಕು. ಕಸದ ವಿಚಾರವನ್ನೇ ತೆಗೆದುಕೊಂಡರೆ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ರಸ್ತೆ, ನೀರು ಸೌಕರ್ಯ ಕಲ್ಪಿಸುವುದು ಸಹ ಸವಾಲಾಗಿದೆ. ಇನ್ನು, ಅಪರಾಧಗಳಿಗೆ ಕಡಿವಾಣ ಹಾಕಿ. ಜನರು ನೆಮ್ಮದಿಯ ಜೀವನ ನಡೆಸುವಂತೆ ಮಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಪ್ರಮುಖವಾದುದು. ಸಂಚಾರ ದಟ್ಟಣೆ ಕೇಳುವುದೇ ಬೇಡ. ಅಂತಿಮವಾಗಿ, ಬೆಂಗಳೂರು ವಾಸಯೋಗ್ಯ, ಸುರಕ್ಷಿತ ನಗರವಾಗಿ ರೂಪುಗೊಳ್ಳುವುದನ್ನು ಜನರು ಅಪೇಕ್ಷಿಸುತ್ತಾರೆ.