ಸಂಪಾದಕೀಯ: ಶಿಕ್ಷಣಕ್ಕೆ ಬಲ ಸಿಗಲಿ

ಸಂಪಾದಕೀಯ: ಶಿಕ್ಷಣಕ್ಕೆ ಬಲ ಸಿಗಲಿ
Published on: 

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಸಿಎಸ್​ಆರ್​ ನೀತಿಯನ್ನು ಜಾರಿಗೊಳಿಸಿದ್ದು, ಶಿಕ್ಷಣ ರಂಗದಲ್ಲಿನ ಮೂಲಸೌಕರ್ಯ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಸಿಗುವ ಆಶಾವಾದ ವ್ಯಕ್ತವಾಗಿದೆ. ಇನ್ನೊಂದೆಡೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಸರ್ಕಾರ ರೂಪಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಬುಧವಾರ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕಾ ಪ್ರತಿನಿಧಿಗಳ ಸಭೆಯಲ್ಲಿ "ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮ ಉದ್ಘಾಟಿಸಿ, ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಬೇಕು ಅಥವಾ ಅವುಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಜತೆ ಜೋಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಯೋಜನೆ ಹಂತಹಂತವಾಗಿ ಅನುಷ್ಠಾನವಾಗಲಿದೆ. ಕಾರ್ಪೊರೇಟ್​ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್​)ಯಡಿ ಖಾಸಗಿ ಉದ್ಯಮಗಳು ನಿರ್ದಿಷ್ಟ ಮೊತ್ತವನ್ನು ಸಾಮಾಜಿಕ ಉದ್ದೇಶಗಳಿಗೆ ನೀಡುವುದು ಕಡ್ಡಾಯ. ಈ ನಿಧಿಯಡಿ ರಾಜ್ಯಕ್ಕೆ ವರ್ಷಕ್ಕೆ ಸುಮಾರು 8,800 ಕೋಟಿ ರೂ. ಲಭ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ. "ಕಂಪನಿಗಳ ಆಡಳಿತ ಮಂಡಳಿಗಳ ಜತೆ ಮಾತನಾಡಿ, ಸಿಎಸ್​ಆರ್​ ನಿಧಿ ಬಳಸಿ ಗ್ರಾಮೀಣ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಮನವಿ ಮಾಡಲಾಗಿದೆ. ವಿದೇಶದಲ್ಲಿ ನೆಲೆಸಿರುವ ಕೆಲವರು ತಮ್ಮ ಹಳ್ಳಿಗಳಲ್ಲಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬಂದಿದ್ದಾರೆ' ಎಂದೂ ಸಿಎಂ ತಿಳಿಸಿದ್ದಾರೆ.

ಸಂಸ್ಥೆಗಳು ತಾವು ಅಭಿವೃದ್ಧಿಪಡಿಸಿದ ಶಾಲೆಗಳಿಗೆ ತಮ್ಮ ಹೆಸರಿಟ್ಟುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಖಾಸಗಿ ಶಿಕ್ಷಣ ದುಬಾರಿಯಾಗಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಜನಸಾಮಾನ್ಯರಿಗೆ ವರವಾಗಬಲ್ಲವು. ಆದರೆ ಶಿಕ್ಷಕರ ಕೊರತೆ, ಮೂಲಸೌಕರ್ಯ ಸಮರ್ಪಕವಾಗಿಲ್ಲದಿರುವುದು ಮುಂತಾದ ಸಮಸ್ಯೆಗಳನ್ನು ಸರ್ಕಾರಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿದೆ. ಸರ್ಕಾರವೊಂದೇ ಒಂದೇ ಸಲಕ್ಕೆ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಅಸಾಧ್ಯ. ಏಕೆಂದರೆ ಇದಕ್ಕೆ ಅಪಾರ ಪ್ರಮಾಣದ ಹಣ ಬೇಕಾಗುತ್ತದೆ. ಆದ್ದರಿಂದ, ಬೇರೆ ಬೇರೆ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಡಿಕರಿಸಿ, ಅಭಿವೃದ್ಧಿಗೆ ಮುಂದಾಗುವುದು ಉತ್ತಮ ನಡೆ. ಆದರೆ ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕಾದುದು ಬಹಳ ಮುಖ್ಯ. ಏಕೆಂದರೆ ಇಲ್ಲಿ ಏನಾದರೂ ನ್ಯೂನತೆಗಳು ಕಂಡುಬಂದಲ್ಲಿ ವಿಶ್ವಾಸಾರ್ಹತೆಗೆ ಧಕ್ಕೆಯಾಗುವ ಅಪಾಯವಿರುತ್ತದೆ.

ಇನ್ನು, ಸರ್ಕಾರಿ ಶಾಲೆಗಳ ದತ್ತು ನೀಡಿಕೆ ಬಗ್ಗೆ ಹಾಗೂ ಕೆಪಿಎಸ್​ ಶಾಲೆಗಳ ಜತೆ ಹತ್ತಿರದ ಶಾಲೆಗಳ ವಿಲೀನದ ಬಗ್ಗೆ ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಯತ್ನ ಎಂಬುದು ಇವರ ವಾದ. ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕಿದ್ದು, ಆರಂಭದಲ್ಲಿಯೇ ಅನುಮಾನವನ್ನು ಬಗೆಹರಿಸುವುದು ಸೂಕ್ತ. ಆಧುನಿಕ ಕಾಲದ ನಿರೀಕ್ಷೆಗಳು, ತಂತ್ರಜ್ಞಾನದ ಅಬ್ಬರದ ನಡುವೆ, ಶಿಕ್ಷಣ ರಂಗ ಸಹ ಅನೇಕ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ಈ ಕ್ಷೇತ್ರದ ಬೆಳವಣಿಗೆಯ ನಿಟ್ಟಿನಲ್ಲಿ ಬೇರೆ ಬೇರೆ ಹಾದಿಗಳನ್ನು ಪರಿಶೋಧಿಸುವುದು ಅನಿವಾರ್ಯ. ಆದರೆ ಈ ಮಾರ್ಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವಂತಿರಬೇಕು. ಏಕೆಂದರೆ, ಇಲ್ಲಿ ಮಕ್ಕಳ ಭವಿಷ್ಯ, ತನ್ಮೂಲಕ ದೇಶದ ಭವಿಷ್ಯವೂ ಸೇರಿಕೊಂಡಿದೆ.