ಸಂಪಾದಕೀಯ: ಉತ್ತಮ ಕ್ರಮ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ರಾಜ್ಯ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗಿದ್ದು, ಇದರಿಂದ ಆಡಳಿತಯಂತ್ರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಸಿಬ್ಬಂದಿ ಇಲ್ಲದೆ ಜನಸಾಮಾನ್ಯರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಇರುವ ಸಿಬ್ಬಂದಿ ಮೇಲೆ ಕಾರ್ಯಭಾರ ಹೆಚ್ಚುತ್ತಿದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲೂ ಇದರಿಂದ ಹಿನ್ನಡೆ ಆಗುತ್ತಿದೆ. ಮತ್ತೊಂದೆಡೆ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಯುವಕ-ಯುವತಿಯರು ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದರೂ, ನೇಮಕಾತಿಗಳೇ ನಡೆಯದೆ ದಿಕ್ಕು ಕಾಣದಂತಾಗಿದ್ದಾರೆ. ಈ ಕುರಿತ ಪ್ರಕ್ರಿಯೆಗಳ ಬಗ್ಗೆಯೇ ಭ್ರಮನಿರಸನಗೊಂಡಿದ್ದಾರೆ.

ರಾಜ್ಯದಲ್ಲಿ 2.80 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳಿದ್ದು, ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದು ಉದ್ಯೋಗಾಕಾಂಕ್ಷಿಗಳ ನಿದ್ದೆಗೆಡಿಸಿದೆ. ಪ್ರತಿ ವರ್ಷವೂ ಒಂದಿಲ್ಲ ಒಂದು ಕಾರಣ ನೀಡಿ, ನೇಮಕಾತಿ ಪ್ರಕ್ರಿಯೆನ್ನು ಮುಂದೂಡುತ್ತ ಬರಲಾಗುತ್ತಿದೆ. ಫೆಬ್ರವರಿ 25ರಂದು ವಿದ್ಯಾನಗರಿ ಧಾರವಾಡದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಎದುರು ಬೇಡಿಕೆಯ ಹಕ್ಕೊತ್ತಾಯ ಮಂಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನೇಮಕಾತಿ ಅಧಿಸೂಚನೆಗಳು ಸಮಯಕ್ಕೆ ಸರಿಯಾಗಿ ಹೊರಡಿಸದಿರುವುದರಿಂದ ಅನೇಕ ಅಭ್ಯರ್ಥಿಗಳು ನಿಗದಿತ ವಯೋಮಿತಿಯನ್ನು ದಾಟುತ್ತಿದ್ದಾರೆ. ಇದರಿಂದ ಅವರ ವರ್ಷಗಳ ಪರಿಶ್ರಮ ವ್ಯರ್ಥವಾಗುವ ಭೀತಿ ಎದುರಾಗಿದೆ. ಇದನ್ನು ಮನಗಂಡು, ಸರ್ಕಾರವು ಇತ್ತೀಚೆಗೆ ಉದ್ಯೋಗಾಕಾಂಕ್ಷಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಘೊಷಿಸಿದೆ ಮತ್ತು ಬಾಕಿ ಇರುವ ನೇಮಕಾತಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ.

ಇನ್ನು, ನೇಮಕಾತಿ ಪ್ರಕ್ರಿಯೆ ಸುಗಮವಾಗಿ ನಡೆಸಬೇಕಾದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ತನ್ನ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಾಣುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ‘ಕೆಪಿಎಸ್​ಸಿಯನ್ನು ಮುಚ್ಚುವುದೇ ಲೇಸು’ ಎಂದು ಇತ್ತೀಚೆಗೆ ಮಾಹಿತಿ-ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಹೇಳಿದ್ದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಹಾಗಾಗಿ, ಸರ್ಕಾರವೇ ಮುಂದಡಿ ಇಟ್ಟು, ಕಡ್ಡಾಯವಾಗಿ ವಾರ್ಷಿಕ ನೇಮಕಾತಿ ನಡೆಸುವ ಮೂಲಕ ಖಾಲಿ ಹುದ್ದೆ ಭರ್ತಿ ಮಾಡಲು ಮುಂದಾಗಿರುವುದು ಸಕಾಲಿಕ ಕ್ರಮವಾಗಿದೆ.

ಬುಧವಾರ ವಿಧಾನಸಭೆಯಲ್ಲಿ ಕೆಪಿಎಸ್​ಸಿ ಕುರಿತ ಚರ್ಚೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ವಾರ್ಷಿಕ ನೇಮಕಾತಿ ನಡೆಯಬೇಕು. ಆಯಾ ಇಲಾಖೆಗಳು ಮುಂದಿನ ಕ್ಯಾಲೆಂಡರ್ ವರ್ಷದಲ್ಲಿ ಎಷ್ಟು ಹುದ್ದೆ ಭರ್ತಿ ಮಾಡಬೇಕು ಎಂಬುದನ್ನು ಕೆಪಿಎಸ್​ಸಿಗೆ ತಿಳಿಸಬೇಕು. ಇದರಿಂದ ಪ್ರತಿ ವರ್ಷ ಕೆಪಿಎಸ್​ಸಿ ಯಾವ ತಿಂಗಳು, ಯಾವ ವಾರ ಮತ್ತು ಯಾವ ದಿನದಂದು ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂಬುದರ ಕುರಿತು ಸ್ಪಷ್ಟತೆ ಇರಲಿದೆ. ಮುಖ್ಯವಾಗಿ, ಯುಪಿಎಸ್​ಸಿ ಮಾದರಿಯ ಈ ನೇಮಕಾತಿ ಕ್ಯಾಲೆಂಡರ್ ಅಭ್ಯರ್ಥಿಗಳ ಒತ್ತಡ ಮತ್ತು ಕಾನೂನು ವಿವಾದಗಳನ್ನು ತಗ್ಗಿಸುತ್ತದೆ’ ಎಂದಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನೇಮಕಾತಿ ಯೋಜನೆ ಸಿದ್ಧಪಡಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net