ಸಂಪಾದಕೀಯ: ಯುವಜನತೆಯ ಭವಿಷ್ಯಕ್ಕೆ ಕಂಟಕ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು ನಗರ ಪೊಲೀಸರು ಇತ್ತೀಚೆಗೆ ಭೇದಿಸಿದ ಬೃಹತ್ ಡ್ರಗ್ಸ್ ಜಾಲವು, ಕರಾವಳಿಯ ಶೈಕ್ಷಣಿಕ ವಲಯದಲ್ಲಿ ಮಾದಕ ದಂಧೆಯ ಬೇರುಗಳು ಎಷ್ಟು ಆಳವಾಗಿ ಹಬ್ಬಿವೆ ಎಂಬುದನ್ನು ಎತ್ತಿ ತೋರಿಸಿದೆ. ಖಾಸಗಿ ಆಂಬುಲೆನ್ಸ್ ಒಂದರಲ್ಲಿ ಡ್ರಗ್ಸ್ ಇಟ್ಟುಕೊಂಡು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲ ಇದರಲ್ಲಿ ಪತ್ತೆಯಾಗಿರುವುದು ಆಶ್ಚರ್ಯದ ಜತೆಗೆ ಆಘಾತವನ್ನು ಉಂಟುಮಾಡಿದೆ. ತುರ್ತು ವಾಹನಗಳಿಗೆ ಸಾರ್ವಜನಿಕವಾಗಿ ದೊರೆಯುವ ಗೌರವ ಹಾಗೂ ಪೊಲೀಸರಿಂದ ಸಿಗುವ ತಪಾಸಣಾ ವಿನಾಯಿತಿಯನ್ನೇ ದುಷ್ಟ ಶಕ್ತಿಗಳು ತಮಗೆ ಸುರಕ್ಷಿತ ಕವಚವನ್ನಾಗಿ ಮಾಡಿಕೊಳ್ಳುತ್ತಿರುವುದು ಗಂಭೀರ ಭದ್ರತಾ ಲೋಪಕ್ಕೆ ಸಾಕ್ಷಿಯಾಗಿದೆ.

ಜೂನ್ 25ರಂದು ಸುರತ್ಕಲ್ ಸಮೀಪದ ಕುಲಾಯಿಗುಡ್ಡೆಯಲ್ಲಿ ಪೊಲೀಸರು ದಾಳಿ ನಡೆಸಿ, ಅಣ್ಣಪ್ಪ ಸ್ವಾಮಿ ಎಂಬಾತನನ್ನು ಬಂಧಿಸಿ 1.50 ಲಕ್ಷ ರೂ. ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈತನ ವಿಚಾರಣೆ ವೇಳೆ ಹೊರಬಿದ್ದ ಸುಳಿವುಗಳನ್ನು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಕೋಟ್ಯಂತರ ರೂಪಾಯಿ ಮೌಲ್ಯದ ಅಂತಾರಾಜ್ಯ ದಂಧೆ. ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿ ಮಹಮ್ಮದ್ ಅಲ್ತಾಫ್ ಮತ್ತು ಮಹಮ್ಮದ್ ಮುಸ್ತಫಾ ಅವರನ್ನು ಬಂಧಿಸಲಾಯಿತು. ಇವರಿಂದ ಸುಮಾರು 5.5 ಕೋಟಿ ರೂ. ಮೌಲ್ಯದ ಬೃಹತ್ ಪ್ರಮಾಣದ, ಅಂದರೆ 5 ಕೆ.ಜಿ. ಎಂಡಿಎಂಎ, ಕಾರು ಹಾಗೂ ಮೊಬೈಲ್ ಫೋನ್​ಗಳನ್ನು ಜಪ್ತಿ ಮಾಡಲಾಗಿದೆ.

ಈ ಜಾಲವು ದೆಹಲಿಯಿಂದ ಎಂಡಿಎಂಎ ಖರೀದಿಸಿ, ಬೆಂಗಳೂರಿನ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಕರಾವಳಿ ಭಾಗಕ್ಕೆ ಸರಬರಾಜು ಮಾಡುತ್ತಿತ್ತು ಎಂಬ ಅಂಶ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಅಕ್ರಮ ಸರಪಳಿಯಲ್ಲಿ ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಎಂಬಾತ ಪ್ರಮುಖ ಪಾತ್ರ ವಹಿಸಿದ್ದು, ತನ್ನ ವಾಹನವನ್ನೇ ಅಕ್ರಮ ದಾಸ್ತಾನು ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ರೋಗಿಗಳನ್ನು ಕರೆದೊಯ್ಯುವ ನೆಪದಲ್ಲಿ ತಡೆರಹಿತವಾಗಿ ಸಂಚರಿಸುತ್ತ, ಅಮಾಯಕ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ವಿಷ ಉಣಿಸುತ್ತಿದ್ದ. ಶಿಕ್ಷಣ ಸಂಸ್ಥೆಗಳಿಗೆ ಹೆಸರಾದ ಮಂಗಳೂರಿನಂತಹ ವಿದ್ಯಾಕಾಶಿಯಲ್ಲಿ ದೇಶದ ಮೂಲೆಮೂಲೆಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಅವರ ಭವಿಷ್ಯವನ್ನು ಬಲಿ ತೆಗೆದುಕೊಳ್ಳಲು ಇಂತಹ ಜಾಲಗಳು ಮುಂದಾಗಿರುವುದು ಹೆತ್ತವರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಇನ್ನು ಮುಂದೆ ಖಾಸಗಿ ಆಂಬುಲೆನ್ಸ್​ಗಳ ನೋಂದಣಿ, ಚಾಲಕರ ಹಿನ್ನೆಲೆ ಪರಿಶೀಲನೆ ಮತ್ತು ಜಿಪಿಎಸ್ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕಿದೆ. ಅನುಮಾನಾಸ್ಪದ ಆಂಬುಲೆನ್ಸ್​ಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸುವುದು ಅನಿವಾರ್ಯವಾಗಿದೆ.

ಕೆಳಹಂತದ ಚಾಲಕರು, ಏಜೆಂಟರನ್ನು ಬಂಧಿಸುವುದರಿಂದ ಈ ಪಿಡುಗು ಕೊನೆಗೊಳ್ಳುವುದಿಲ್ಲ. ಮೂಲ ಸೂತ್ರಧಾರರನ್ನು ಪತ್ತೆಹಚ್ಚಿ, ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಶಾಲಾ-ಕಾಲೇಜುಗಳ ಸುತ್ತ ಸಿಸಿಟಿವಿ ಕಣ್ಗಾವಲು ಹೆಚ್ಚಿಸಬೇಕು. ಮಾದಕ ದಂಧೆಯ ಸುಳಿವು ಸಿಕ್ಕರೆ ತಕ್ಷಣ ದೂರು ನೀಡಲು ಗೌಪ್ಯ ಸಹಾಯವಾಣಿಗಳನ್ನು ಆರಂಭಿಸಬೇಕು. ಯುವಜನತೆಯನ್ನು ಈ ವಿಷವರ್ತಲದಿಂದ ಪಾರು ಮಾಡಲು ಆಡಳಿತ ವ್ಯವಸ್ಥೆ ಮತ್ತು ಸಮಾಜದ ಜಂಟಿ ಹೋರಾಟ ತುರ್ತಾಗಿ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net