

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ನೇಮಕಾತಿ ಹಗರಣದ ತನಿಖೆ ಮುಂದುವರೆಸಿರುವ ಜಾರಿ ನಿರ್ದೇಶನಾಲಯ(ಇ.ಡಿ) ಇದೀಗ ಗೃಹ ಸಚಿವರ ಮೇಲಿರುವ ಆರೋಪದ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.
2023-24ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ (ಆರ್‌ಡಿಪಿಆರ್)ಖಾಲಿ ಇದ್ದ 24 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. 400 ಪಶುವೈದ್ಯಾಧಿಕಾರಿಗಳ ಹಗರಣದ ಜತೆಗೆ ಆರ್‌ಡಿಪಿಆರ್ ನೇಮಕಾತಿ ಕೂಡ ತಳಕು ಹಾಕಿಕೊಂಡಿತ್ತು.
ಮೂವರ ವಿಚಾರಣೆ:
ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ವಿಚಾರಣೆ ನಡೆಸಿರುವ ಇ.ಡಿ ತಂಡ, ಎಇಇ ಹುದ್ದೆಯ ಓಎಂಆರ್ ತಿದ್ದುಪಡಿ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಮೂವರು ಆರೋಪಿಗಳನ್ನು ಪ್ರತ್ಯೇಕ ವಿಚಾರಣೆಗೊಳಪಡಿಸಿ ಅವರ ಹೇಳಿಕೆ ದಾಖಲಿಸಿಕೊಂಡಿದೆ. ಪ್ರಮುಖವಾಗಿ ಸಾಹುಕಾರ್ ಮತ್ತು ಜ್ಞಾನೇಂದ್ರರ ಹೇಳಿಕೆಗಳು ಭಿನ್ನವಾಗಿವೆ ಎಂದು ಮೂಲಗಳು ತಿಳಿಸಿವೆ.
ಎಇಇ ಪರೀಕ್ಷೆ ಅಕ್ರಮದ ಕುರಿತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ವಿಚಾರವಾಗಿ ಇ.ಡಿ ವಿವಿಧ ಆಯಾಮದಲ್ಲಿ ತನಿಖೆ ಆರಂಭಿಸಿದೆ.
ನೋಟಿಸ್ ನೀಡುವ ಸಾಧ್ಯತೆ?
ಪಶುವೈದ್ಯಾಧಿಕಾರಿಗಳ ಮತ್ತು ಮೀನುಗಾರಿಕೆ ಇಲಾಖೆ ನೇಮಕಾತಿಯಲ್ಲಿ ಹಲವು ಅಭ್ಯರ್ಥಿಗಳ ಓಎಂಆರ್ ಶೀಟ್ ತಿದ್ದುಪಡಿ, ಪರೀಕ್ಷೆಗೂ ಮುನ್ನವೇ ಕೀ ಉತ್ತರ ಹಂಚಿಕೆ ಹಾಗೂ ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಲಂಚ ಪಡೆದಿರುವ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜ್ಞಾನೇಂದ್ರ ಕುಮಾರ್ ಮತ್ತು ಸಾಹುಕಾರ್ ಹೇಳಿಕೆ ಆಧರಿಸಿ ಗೃಹ ಸಚಿವರಿಗೂ ಇ.ಡಿ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಪಿಎಸ್ಸಿ ನಿಯಮಗಳನ್ನು ಬುಡಮೇಲು ಮಾಡಿ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ನಾಲ್ವರು ಆರೋಪಿಗಳ ವಿರುದ್ದ ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ 585 ಪುಟುಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಂತರದ ತನಿಖೆಯಲ್ಲಿ ಆರ್‌ಡಿಪಿಆರ್ ಮತ್ತು ಕೆಎಎಸ್ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಕುರಿತು ತನಿಖೆ ಇ.ಡಿ ಅಧಿಕಾರಿಗಳು ಇಳಿದಿದ್ದಾರೆ.
ಹೈಕೋರ್ಟ್ ಆದೇಶದ ಮೇರೆಗೆ ಕೆಪಿಎಸ್‌ಸಿ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ ಬೆನ್ನಲ್ಲೇ ಆಯೋಗದ ಸದಸ್ಯೆ ಬಿ.ವಿ.ಗೀತಾ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಗೀತಾ ಅವರ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನಗರದ ಸೆಷನ್ಸ್ ಕೋರ್ಟ್‌ಗೆ ಹಾಜರು ಪಡೆಸಿದರು. ನ್ಯಾಯಾಲಯ ಆರೋಪಿ ಬಿ.ವಿ.ಗೀತಾ ಅವರನ್ನು ನ.21ರ ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ಪ್ರಕರಣದಲ್ಲಿ ನ.11ರಂದು ಜಾಮೀನಿನ ಮೇಲೆ ಗೀತಾ ಹೊರಗೆ ಬಂದಿದ್ದರು. ಈ ಮತ್ತೆ ಐಎಸ್‌ಟಿ ವಶಕ್ಕೆ ಪಡೆದಿದೆ.
ಪರೀಕ್ಷಾ ಅಕ್ರಮದ ಕುರಿತು ವಿಚಾರಣೆಗೆ ಹಾಜರಾಗುವಂತೆ ಗೀತಾ ಅವರನ್ನು ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ಆದರೆ, ನೋಟಿಸ್‌ಗೆ ಹಾಜರಾಗದೆ ಮತ್ತು ವಿಚಾರಣೆಗೆ ಅಸಹಕಾರ ತೋರಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪಶುವೈದ್ಯಾಧಿಕಾರಿ ಹಾಗೂ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವೇಳೆ ಸಾಹುಕಾರ್ ಜತೆಗೂಡಿ ಬಿ.ವಿ.ಗೀತಾ ಅಕ್ರಮ ಎಸಗಿದ್ದರು. ಮಹಿಳಾ ಅಭ್ಯರ್ಥಿಯಿಂದ ಲಕ್ಷದ ಹಣ ಪಡೆದಿರುವುದು, ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಜತೆ ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಡೀಲ್ ಮಾಡಿರುವುದು ಸೇರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬಿ.ವಿ.ಗೀತಾ ಮೇಲೆ ದಾಖಲಾಗಿರುವ ಎ್ಐಆರ್ ಆದರಿಸಿ ಎಸ್‌ಐಟಿ ತಂಡ ವಶಕ್ಕೆ ಪಡೆದಿದೆ.